ಕೊಡಗು ಸಂತ್ರಸ್ತರಿಗೆ ನೀಡಿದ್ದ ಹಣ ಲೂಟಿ: ಆರೋಪಿಗಳಿಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಹೈಕೋರ್ಟ್ ಆದೇಶ

Update: 2018-12-07 16:41 GMT

ಬೆಂಗಳೂರು, ಡಿ.7: ಕೊಡಗು ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಿಗೆ ನೀಡಿದ್ದ ಹಣ ಲಪಟಾಯಿಸಿದ ಮತ್ತು ಜಾತಿ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಮೂವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಈ ಸಂಬಂಧ ಸೋಮವಾರ ಪೇಟೆಯ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಘಟಕದ ಅಧ್ಯಕ್ಷ ಕೆ.ಎನ್.ದೀಪಕ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಹಾಗೂ ಅವರ ಪತಿ ಎಚ್.ಬಿ.ಸುರೇಶ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಅಶೋಕ ಜಿ.ನಿಜಗಣ್ಣವರ್ ಶುಕ್ರವಾರ ಪುರಸ್ಕರಿಸಿದರು. ಆರೋಪಿಗಳು ಹೈಕೋರ್ಟ್‌ನ ಈ ಆದೇಶದ ಪ್ರತಿ ಕೈಸೇರಿದ ಒಂದು ವಾರದೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಆದೇಶಿಸಲಾಗಿದೆ.

ಪ್ರಕರಣವೇನು: ಪ್ರಕೃತಿ ವಿಕೋಪದಲ್ಲಿ ನಷ್ಟ ಅನುಭವಿಸಿದ ನಮಗೆ ಮನೆ ಕಟ್ಟಿಕೊಳ್ಳಲು ಕರವೇ ವತಿಯಿಂದ ಹಣ ಕೊಡಿಸುವುದಾಗಿ ಆರೋಪಿಗಳು ಹೇಳಿದ್ದರು. ಅದರಂತೆ 2018ರ ಸೆಪ್ಟೆಂಬರ್ 3ರಂದು ನಮ್ಮನ್ನು ಸೋಮವಾರ ಪೇಟೆಯ ಪತ್ರಿಕಾ ಭವನಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಗೌಡ ನಮಗೆ 20 ಸಾವಿರ ನಗದು ನೀಡಿ ಹೋದ ನಂತರ ಅದನ್ನು ನಮ್ಮಿಂದ ಬಲವಂತವಾಗಿ ಕಿತ್ತುಕೊಂಡರು ಎಂದು ಮಾಸಗೋಡು ಗ್ರಾಮದ ಎಂ.ಆರ್. ಶೈಲಾ ಸೋಮವಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹಣ ಪಡೆಯುವಾಗ ನಮ್ಮ ಬಟ್ಟೆ ಬಿಚ್ಚಿ ಹಣ ಹುಡುಕಿದರು. ಪರಿಶಿಷ್ಟ ಜಾತಿಗೆ ಸೇರಿದ ನಮ್ಮನ್ನು ಜಾತಿ ಹೆಸರು ಹಿಡಿದು ಬೈದರು ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News