ಮಂಡ್ಯ: ಪೆಂಟಾವಲೆಂಟ್ ಚುಚ್ಚುಮದ್ದು ಪಡೆದ ಹಸುಳೆ ಸಾವು; ವೈದ್ಯರ ವಿರುದ್ಧ ಪೋಷಕರ ಆಕ್ರೋಶ

Update: 2018-12-07 17:11 GMT
ಸಾಂದರ್ಭಿಕ ಚಿತ್ರ

ಮಂಡ್ಯ, ಡಿ.7: ಪೆಂಟಾವಲೆಂಟ್ ಚುಚ್ಚುಮದ್ದಿಗೆ ಶಿಶು ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.

ಮಂಡ್ಯ ತಾಲೂಕು ಚೀರನಹಳ್ಳಿಯ ಜ್ಯೋತಿ ಸ್ವಾಮಿ ದಂಪತಿ ಒಂದೂವರೆ ತಿಂಗಳ ಮಗು ಚುಚ್ಚುಮದ್ದು ಪಡೆದ 24 ಗಂಟೆಯೊಳಗೆ ಸಾವನ್ನಪ್ಪಿದೆ.
ತವರು ಮನೆ ಕಾಡುಕೊತ್ತನಹಳ್ಳಿಯಲ್ಲಿ ಬಾಣಂತನಕ್ಕಿದ್ದ ಜ್ಯೋತಿ ಗುರುವಾರ ಮಧ್ಯಾಹ್ನ ಮಗುವಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೆಚಿಟಾವಲಿನ್ ಚುಚ್ಚುಮದ್ದು ಹಾಕಿಸಿದ್ದರು. ಚುಚ್ಚುಮದ್ದು ಪಡೆದ ಮಗುವಿಗೆ ಜ್ವರ ಬಂದು ರಾತ್ರಿಯೆಲ್ಲಾ ನರಳಿ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದೆ ಎನ್ನಲಾಗಿದೆ. ಇದಕ್ಕೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆಕ್ರೋಶ ವ್ಯಕ್ತವಾಗಿದೆ.

ನರಳುತ್ತಿದ್ದ ಮಗುವನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ ವೈದ್ಯರು ಸ್ಪಂದಿಸಲಿಲ್ಲ ಎಂದು ಆರೋಪಿಸಿದ ಪೋಷಕರು, ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.

ಪೆಂಟಾವಲೆಂಟ್ ಚುಚ್ಚುಮದ್ದು ಪಡೆದ ಮೂರು ಮಕ್ಕಳು ಕಳೆದ ವರ್ಷ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದವು. ಆದರೆ, ಸಾವಿಗೆ ಚುಚ್ಚುಮದ್ದು ಕಾರಣವಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News