ರೈತರ ಸಮಸ್ಯೆ ಕುರಿತು ಅಧಿಕಾರಿಗಳು ಮೋದಿಯ ಗಮನ ಸೆಳೆಯಿರಿ: ಕುರುಬೂರು ಶಾಂತಕುಮಾರ್

Update: 2018-12-07 17:54 GMT

ಮೈಸೂರು,ಡಿ.7: ರೈತರ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಜಿಲ್ಲಾಧಿಕಾರಿಗಳು ಶ್ರಮ ವಹಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿ ಸಭಾಗಣದಲ್ಲಿ ಶುಕ್ರವಾರ ರೈತ ಮುಖಂಡರ ಜೊತೆ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭತ್ತಕ್ಕೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಭತ್ತದ ಬೆಲೆ ಪಾತಾಳಕ್ಕೆ ಇಳಿದಿದೆ. ಇದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಮಧ್ಯವರ್ತಿಗಳು ಭತ್ತ ವ್ಯಾಪಾರದಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಟಾಸ್ಕ್ ಪೋರ್ಸ್ ಮೂಲಕ  ಸಮಸ್ಯೆ ಬಗೆಹರಿಸಬೇಕು. ನಾವು ಮೋದಿಯವರನ್ನು ಭೇಟಿ ಮಾಡಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಮಾತನಾಡಿ ಈಗಾಗಲೇ ಭತ್ತ ಖರೀದಿಗೆ ಸರ್ಕಾರ ಯೋಜನೆ ಜಾರಿ ಮಾಡಿದೆ. ಡಿ.10 ವರೆಗೆ ಭತ್ತ ಖರೀದಿಗೆ ನೋಂದಣಿ ಪ್ರಾರಂಭ ಮಾಡಲಾಗುವುದು. ಭತ್ತವನ್ನು ರೈಸ್ ಮಿಲ್ ಗಳ ಮೂಲಕ ನೇರವಾಗಿ ಸರ್ಕಾರ ಖರೀದಿ ಮಾಡಲಿದೆ. ಭತ್ತದ ಗುಣಮಟ್ಟವನ್ನು ಪರಿಶೀಲಿಸಿ ಸೂಕ್ತ ಬೆಂಬಲ ಬೆಲೆ ನೀಡಲಾಗುವುದು. ಸಣ್ಣ ಮತ್ತು ಮಧ್ಯಮ ಕೃಷಿಕರು ಬೆಳೆದ ಭತ್ತಕ್ಕೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ಸೂಚನೆ ನೀಡಿದೆ. ಮಾರ್ಚ್ ತಿಂಗಳವರೆಗೆ ನೋಂದಣಿ ಮತ್ತು ಖರೀದಿ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ರೈತರ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News