ಮೈಸೂರು: ನಕಲಿ ದಾಖಲಾತಿ ಸೃಷ್ಟಿಸಿ ನಿವೇಶನ ಮಾರಾಟ ಮಾಡುತ್ತಿದ್ದ ಮೂವರ ಬಂಧನ

Update: 2018-12-07 18:27 GMT

ಮೈಸೂರು,ಡಿ.7: ನಕಲಿ ದಾಖಲಾತಿ ಸೃಷ್ಠಿಸಿ ನಿವೇಶನ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ, ಬಂಧಿತರಿಂದ 23.50 ಲಕ್ಷ ರೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅರವಿಂದ ನಗರದ ಸೋಮೇಶ್(35), ಸಾತಗಳ್ಳಿಯವರಾದ ಮಕ್ಬಲ್(47), ಜಯರಾಮ್(48) ಬಂಧಿತರು. ಹಿನಕಲ್‍ನ ಮಹಿಳೆಯೊಬ್ಬರಿಗೆ ವಿಜಯನಗರ 4ನೇ ಹಂತ, 3ನೇ ಪೇಸ್‍ನಲ್ಲಿರುವ ನಿವೇಶನವೊಂದಕ್ಕೆ ನಕಲಿ ದಾಖಲಾತಿ ಸೇರಿದಂತೆ ಸುರೇಶ್ ಚಂದ್ರ ಬಾಬು ಎಂಬ ನಕಲಿ ಮಾಲಕನನ್ನು ಸೃಷ್ಠಿಸಿ, 72 ಲಕ್ಷ ರೂ ಗಳಿಗೆ ಮಾರಾಟ ಮಾಡಿದ್ದರು. ಮಹಿಳೆ ಖಾತೆ ಮಾಡಿಸಲು ಹೋದಾಗ ಮೋಸ ಹೋಗಿರುವ ಬಗ್ಗೆ ತಿಳಿದು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ನ.23ರಂದು ಸೋಮೇಶ್‍ನನ್ನು ಬಂಧಿಸಿದ್ದಾರೆ. ಈತನ ವಿಚಾರಣೆ ಮೆರೆಗೆ ನಿವೇಶನದ ಅಸಲಿ ಮಾಲಕನಂತೆ ನಟಿಸಿ ಸಹಿ ಮಾಡಿದ್ದ ಮಕ್ಬಲ್ ಹಾಗೂ ಜಯರಾಮ್‍ನನ್ನು ಬಂಧಿಸಿ, ಮೂವರಿಂದ 23.50 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ.  

ಮುಡಾ ವ್ಯಾಪ್ತಿಯಲ್ಲಿ ಮಂಜೂರಾಗಿರುವ ನಿವೇಶನಗಳ ಪೈಕಿ ದೂರದ ಊರುಗಳಲ್ಲಿರುವ ನಿವೇಶನದ ಮಾಲಕರ ವಿವರಗಳನ್ನು ಪಡೆದು, ಆ ನಿವೇಶನಗಳ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಹಾಗೂ ನಕಲಿ ಮಾಲಕರನ್ನು ಸೃಷ್ಟಿಸುತ್ತಿದ್ದರು. ಸಾರ್ವಜನಿಕರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ನಂಬಿಸಿ, ಸಾರ್ವಜನಿಕರಿಂದ ಹಣ ಪಡೆದು ನಕಲಿ ಮಾಲಕರಿಂದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸುತ್ತಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ಸಾರ್ವಜನಿಕರು ಇನ್ನು ಮುಂದೆ ನಿವೇಶನ ಕೊಳ್ಳುವ ಸಮಯದಲ್ಲಿ ನಿವೇಶನದ ಮಾಲಕರನ್ನು ಖುದ್ದಾಗಿ ಭೇಟಿ ಮಾಡಿ ದಾಖಲಾತಿಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಲ್ಲಿ ಪರಿಶೀಲಿಸಿ ನಿವೇಶನ ಖರೀದಿಸುವಂತೆ ಮೈಸೂರು ನಗರದ ಪೊಲೀಸ್ ಆಯುಕ್ತರು ಸಲಹೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News