ಕೇಳಿಸದೆ ಕೆರೆಗಳ ಕರೆ!?

Update: 2018-12-08 04:24 GMT

 ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳನ್ನು ಸಂರಕ್ಷಿಸುವ ವಿಷಯದಲ್ಲಿ ನಿರ್ಲಕ್ಷ ತೋರಿದ್ದಕ್ಕಾಗಿ ಬಿಬಿಎಂಪಿ ಹಾಗೂ ಕರ್ನಾಟಕ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ), ಸರಕಾರಕ್ಕೆ 75 ಕೋಟಿ ರೂ. ದಂಡವನ್ನು ವಿಧಿಸಿದೆ. ಇದರಿಂದ ತೀವ್ರ ಮುಜುಗರಕ್ಕೆ ಸಿಲುಕಿರುವ ರಾಜ್ಯ ಸರಕಾರ, ‘‘ದಂಡ ವಿಧಿಸುವ ಅಧಿಕಾರ ಎನ್‌ಜಿಟಿಗಿಲ್ಲ. ಅದು ತನ್ನ ಕಾರ್ಯವ್ಯಾಪ್ತಿಯನ್ನು ಅರಿತುಕೊಳ್ಳಬೇಕು’’ ಎಂದು ಹೇಳಿ ತನ್ನನ್ನು ತಾನು ಸಮರ್ಥಿಸಲು ಹೊರಟಿದೆ. ಎನ್‌ಜಿಟಿಗೆ ದಂಡ ವಿಧಿಸುವ ಅಧಿಕಾರವಿದೆಯೋ ಇಲ್ಲವೋ ಎನ್ನುವುದು ತದನಂತರದ ಪ್ರಶ್ನೆ. ಆದರೆ ಬೆಂಗಳೂರು ಕೆರೆಗಳ ಮಾಲಿನ್ಯ ಮತ್ತು ರಾಜ್ಯಾದ್ಯಂತ ಇರುವ ಕೆರೆಗಳ ದುಸ್ಥಿತಿಯ ಬಗ್ಗೆ ಎನ್‌ಜಿಟಿಯ ತರಾಟೆಯನ್ನು ನಾವು ನಿರ್ಲಕ್ಷಿಸುವಂತಿಲ್ಲ. ಇದು ಕೇವಲ ಎನ್‌ಜಿಟಿಗೆ ಸಂಬಂಧಿಸಿದ ಪ್ರಶ್ನೆಯಂತೂ ಅಲ್ಲವೇ ಅಲ್ಲ. ಕೆರೆಗಳ ಅಳಿವು ಉಳಿವಿನಲ್ಲಿ ಕರ್ನಾಟಕದ ಅಳಿವು ಉಳಿವು ತಳಕು ಹಾಕಿಕೊಂಡಿದೆ. ಇಂದು ಎನ್‌ಜಿಟಿಗೆ ಸರಕಾರ ದಂಡ ಕಟ್ಟದೇ ಪಾರಾಗಬಹುದು, ಆದರೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಲ್ಲದೆ ಪಡಬೇಕಾದ ಬವಣೆಗಳಿಗೆ ಹೋಲಿಸಿದರೆ, ಎನ್‌ಜಿಟಿ ಸದ್ಯಕ್ಕೆ ವಿಧಿಸಿರುವ ದಂಡ ಏನೇನೂ ಅಲ್ಲ. ಅದನ್ನು ಒಂದು ಎಚ್ಚರಿಕೆಯಾಗಿ ರಾಜ್ಯ ಸರಕಾರ ಸ್ವೀಕರಿಸಿ ಕರ್ನಾಟಕದ ಕೆರೆಗಳ ಕರೆಗೆ ಕಿವಿಯಾಗಬೇಕಾಗಿದೆ.

   ಬೆಂಗಳೂರನ್ನೇ ತೆಗೆದುಕೊಳ್ಳೋಣ. ಇಂದು ಬೆಂಗಳೂರು ಕುಡಿಯುವ ನೀರಿಗಾಗಿ ಕಾವೇರಿ ನದಿಯನ್ನು ಆಶ್ರಯಿಸುತ್ತಿದೆ. ಈ ನದಿಯ ನೀರು ಬತ್ತಿದರೆ ಬೆಂಗಳೂರು ಸೇರಿದಂತೆ ಆಸುಪಾಸಿನ ಜನರು ನೀರಿಗಾಗಿ ವಿಲವಿಲನೆ ಒದ್ದಾಡುವ ಸ್ಥಿತಿಯಿದೆ. ಇಂದು ಬೇರೆ ಬೇರೆ ಕಾರಣಗಳಿಗಾಗಿ ನೀರಿನ ಬಳಕೆ ಹೆಚ್ಚುತ್ತಿದೆ. ನೀರಿಗಾಗಿ ಬೇಡಿಕೆಗಳೂ ಜಾಸ್ತಿಯಾಗುತ್ತಿವೆ. ಆದರೆ ನದಿಯ ವಿಸ್ತಾರವೇನೂ ಇದರ ಜೊತೆಗೆ ಜೊತೆಗೇ ಹೆಚ್ಚಳವಾಗಿಲ್ಲ. ಮುಂದೆ ಹೆಚ್ಚಳವಾಗುವುದೂ ಇಲ್ಲ. ಹೀಗಿರುವಾಗ ಭವಿಷ್ಯದ ದೃಷ್ಟಿಯಿಂದಲೂ ಈ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಬೇಕಾಗಿದೆ. ಬೆಂಗಳೂರು ಕುಡಿಯುವ ನೀರಿಗಾಗಿ ಕೇವಲ ನದಿಯನ್ನೇ ಆಶ್ರಯಿಸಬೇಕಾದ ಅಗತ್ಯವಿದೆಯೇ? ಬೆಂಗಳೂರನ್ನು ಉದ್ಯಾನವನಗಳ ನಗರ ಎಂದು ಕರೆಯುತ್ತಾರೆ. ಆದರೆ ಅದಕ್ಕಿಂತ ಮುಂಚೆ ಬೆಂಗಳೂರು ‘ಕೆರೆಗಳ ತವರಾಗಿತ್ತು’ ಎನ್ನುವುದನ್ನು ಆಳುವವರು ಮರೆತಿದ್ದಾರೆ. ಎರಡು ವರ್ಷಗಳ ಹಿಂದೆ ಕೆರೆಗಳನ್ನು ಪರಿಶೀಲನೆಗೊಳ ಪಡಿಸಿದಾಗ 835 ಕೆರೆಗಳು ಅಂಕಿಅಂಶಗಳಿಗೆ ದಕ್ಕಿತ್ತು. ದಾಖಲೆಗಳ ಪ್ರಕಾರ 27, 000 ಎಕರೆ ಪ್ರದೇಶಗಳು ಕೆರೆಗಳಿಗೆ ಸಂಬಂಧಿಸಿದ್ದು. ಆದರೆ ಇದರಲ್ಲಿ ನಾಲ್ಕು ಸಾವಿರ ಎಕರೆಗಳಿಗೂ ಅಧಿಕ ಒತ್ತುವರಿಯಾಗಿದೆ. ಒಂದು ಮೂಲದ ಪ್ರಕಾರ ಇಡೀ ರಾಜ್ಯದಲ್ಲಿ 10,000ಕ್ಕೂ ಅಧಿಕ ಕೆರೆಗಳು ಕಣ್ಮರೆಯಾಗಿದೆ.
  ಈ ನಾಡಿನ ಸಂಸ್ಕೃತಿ ಕೆರೆಗಳ ಪಾತ್ರಗಳಲ್ಲಿ ಹರಡಿಕೊಂಡಿತು. ಕೆರೆಗಳೇ ಈ ನಾಡಿನ ಜೀವಾಳ. ಬೃಹತ್ ಅಣೆಕಟ್ಟುಗಳು ತಲೆಯೆತ್ತುವ ಮುನ್ನ ಈ ನಾಡನ್ನು ಪೊರೆದಿರುವುದು ಬೃಹತ್ ಕೆರೆಗಳು. ಉತ್ತರ ಕರ್ನಾಟಕಕಂತೂ ಇದು ಅಕ್ಷರ ಸತ್ಯ. ಇಲ್ಲಿನ ಒಂದೊಂದು ಕೆರೆಗೂ ಒಂದೊಂದು ಇತಿಹಾಸವಿದೆ. ಕರ್ನಾಟಕದ ಇತಿಹಾಸ, ಪರಂಪರೆಯನ್ನು ಇಲ್ಲಿನ ಖ್ಯಾತ ಕೆರೆಗಳ ಜೊತೆಗೆ ಗುರುತಿಸಿಕೊಳ್ಳಬಹುದು.

ಈ ನಾಡಿನ ಕೆರೆಗಳನ್ನು ಪುನರುಜ್ಜೀವಗೊಳಿಸುವುದೆಂದರೆ, ರಾಜ್ಯದ ಕೃಷಿ ಸಂಸ್ಕೃತಿಯ ಪರಂಪರೆಗೆ ಜೀವ ಕೊಟ್ಟಂತೆ. ಕನ್ನಡ ನಾಡಿನ ಕೆರೆಗಳಿಗೆ ಕದಂಬರವರೆಗಿನ ಇತಿಹಾಸವಿದೆ. ಬಹುಶಃ ಕೆರೆಗಳಿಗಿರುವ ಸಾಂಸ್ಕೃತಿಕ ಮಹತ್ವದಿಂದಲೇ ಇರಬೇಕು, ಈ ನಾಡಿನ ಎಲ್ಲ ಪ್ರಮುಖ ದೇವಳಗಳು ತಮ್ಮದೇ ಕೆರೆಗಳನ್ನು ಹೊಂದಿವೆ. ಈ ನಾಡನ್ನು ಆಳಿದ ರಾಜರುಗಳ ಹೆಜ್ಜೆಗುರುತುಗಳನ್ನು ಕೆರೆಗಳ ತಟದಲ್ಲಿ ಕಾಣಬಹುದು. ಚಿತ್ರದುರ್ಗದ ಚಂದವಳ್ಳಿಯ ಕೆರೆ, ಚೆನ್ನಗಿರಿ ತಾಲೂಕಿನ ಸೂಳೆಕೆರೆ, ಮೈಸೂರಿನ ಲಿಂಗಾಂಬುದಿ ಕೆರೆ, ಕುಕ್ಕರ ಹಳ್ಳಿ ಕೆರೆ...ಹೀಗಿ ನಾಡಿನ ನೂರಾರು ಕೆರೆಗಳು ಜಲಾಶಯದ ಕಾರಣದಿಂದ ಮಾತ್ರವಲ್ಲ ಐತಿಹಾಸಿ, ಸಾಂಸ್ಕೃತಿಕ ಕಾರಣಗಳಿಂದಲೂ ಮಹತ್ವಪೂರ್ಣ. ಮೈಸೂರಿನಲ್ಲಿ 20ಕ್ಕೂ ಅಧಿಕ ಕೆರೆಗಳು ಇದ್ದವಾದರೂ, ಅವುಗಳಲ್ಲಿ ಭಾಗಶಃ ಹೂಳು ತುಂಬಿ ಇಲ್ಲವಾಗಿವೆ. ಇಲ್ಲಿನ ಶೇ. 25ರಷ್ಟು ಕೆರೆಗಳು ನಿವೇಶನಗಳಾಗಿ ಪರಿವರ್ತನೆಗೊಂಡಿವೆ. ಕುಕ್ಕರ ಹಳ್ಳಿ ಕೆರೆ, ಲಿಂಗಾಂಬುದಿ ಕೆರೆಗಳು ಒಂದಿಷ್ಟು ಜೀವಂತಿಕೆಯನ್ನು ಉಳಿಸಿಕೊಂಡಿವೆ. ಅಳಿದುಳಿದ ಕೆರೆಗಳ ನೀರು ತೀರಾ ಕಲುಷಿತಗೊಂಡಿವೆ. ಇಂದು ಬೆಂಗಳೂರು ನಿಂತಿರುವುದೇ ಕೆರೆಗಳ ಮೇಲೆ. ಉಳಿದಂತೆ ಕೆರೆಗಳ ಜಾಗಗಳನ್ನು ಬೃಹತ್ ಕಟ್ಟಡಗಳು ಒತ್ತುವರಿ ಮಾಡಿಕೊಂಡಿವೆ. ಇರುವ ಕೆರೆಗಳನ್ನೆಲ್ಲ ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡಿ, ಅದರ ಮೇಲೆ ಕಟ್ಟಡಗಳನ್ನು ನಿಲ್ಲಿಸಿ ನೀರಿಗಾಗಿ ಹಾಹಾಕಾರಗೈಯುವುದು, ಬರವೆಂದು ಗೋಳಾಡುವುದು ವಿಪರ್ಯಾಸವೇ ಸರಿ. ಈ ರಾಜ್ಯಕ್ಕೆ ಬೇಕಾದ ನೀರನ್ನು ಕೊಡುವ ಶಕ್ತಿ ಈ ನಾಡಿನಲ್ಲಿರುವ ಕೆರೆಗಳಿಗೆ ಇತ್ತು. ಕೆರೆಗಳನ್ನು ನಾವು ಉಳಿಸಿದ್ದಿದ್ದರೆ ಅವುಗಳೂ ನಮ್ಮನ್ನು ಉಳಿಸುತ್ತಿದ್ದವು. ದುರದೃಷ್ಟ ವಶಾತ್ ಇರುವ ಕೆರೆಗಳೂ ಮಾಲಿನ್ಯಗೊಳ್ಳುತ್ತಿವೆ. ಉಳಿದಂತೆ, ಗಣೇಶ ವಿಸರ್ಜನೆ, ದುರ್ಗಾ ವಿಸರ್ಜನೆ ಎಂದು ಧಾರ್ಮಿಕ ಆಚರಣೆಗಳ ಹೆಸರಲ್ಲೂ ಕೆರೆಗಳನ್ನು ಯಾವುದೇ ಪಾಪಪ್ರಜ್ಞೆಯಿಲ್ಲದೆ ನಾಶ ಮಾಡುತ್ತಾ ಬಂದಿದ್ದೇವೆ. ಕೆರೆಗಳ ಮಾಲಿನ್ಯ ನಮ್ಮ ಹಕ್ಕು ಎಂದು ಬಗೆದಿದ್ದೇವೆ.

ನೀರಿಗಾಗಿ ನಾವು ಪರರಾಜ್ಯಗಳ ಜೊತೆಗೆ ಸಂಘರ್ಷಕ್ಕಿಳಿದಿದ್ದೇವೆ. ಆದರೆ ಇಲ್ಲಿರುವ ಹಲವು ಸಾವಿರ ಎಕರೆ ವಿಸ್ತೀರ್ಣಗಳಿರುವ ಕೆರೆಗಳನ್ನು ನಾಶ ಮಾಡಿರುವುದು ಪರರಾಜ್ಯಗಳಿಂದ ಬಂದವರಲ್ಲ. ಅದಕ್ಕೆ ಕಾರಣರು ನಾವೇ ಆಗಿದ್ದೇವೆ. ಕನಿಷ್ಠ ಅಳಿದುಳಿದ ಕೆರೆಗಳ ಕಡೆಗಾದರೂ ನಾವು ಗಮನ ನೀಡಬೇಕಾಗಿದೆ. ಈಗಾಗಲೇ ಹೂಳು ತುಂಬಿ ಅವನತಿಯಲ್ಲಿರುವ ಕೆರೆಗಳನ್ನು ಶುಚಿಗೊಳಿಸಿ ಅವುಗಳಿಗೆ ಜೀವ ನೀಡಬೇಕು. ಹಾಗೆಯೇ ಕೆರೆಗಳ ಒತ್ತುವರಿಯನ್ನು ಗುರುತಿಸಿ, ಅವುಗಳ ಹಿಂದಿರುವ ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಒಣಗಿದ ಕೆರೆಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸುವುದಕ್ಕೆ ಯಾವ ರೀತಿಯಲ್ಲೂ ಅವಕಾಶ ಕೊಡಬಾರದು. ಕೆರೆಗಳ ವಿಸ್ತೀರ್ಣಗಳನ್ನು ಗುರುತಿಸಿ ಅವುಗಳನ್ನು ಮತ್ತೆ ತುಂಬುವಂತೆ ಮಾಡಿದರೆ ಕುಡಿಯುವ ನೀರಿನ ಸಮಸ್ಯೆಯಿಂದ ಬೆಂಗಳೂರು ಶಾಶ್ವತವಾಗಿ ಪಾರಾಗುತ್ತದೆ. ಅಷ್ಟೇ ಅಲ್ಲ, ಕೆರೆಗಳ ನೀರನ್ನು ಇನ್ನಿತರ ಕಾರ್ಯಗಳಿಗೂ ಬಳಸುವುದಕ್ಕೆ ಸಾಧ್ಯವಾಗಬಹುದು. ಇದರಿಂದಾಗಿ ಕಾವೇರಿಯೊಂದನ್ನೇ ನೀರಿಗಾಗಿ ಅವಲಂಬಿಸುವುದು ತಪ್ಪುತ್ತದೆ. ಕೆರೆಗಳನ್ನು ಉಳಿಸಿದರೆ, ಕೆರೆ ನಮ್ಮನ್ನು ಉಳಿಸುತ್ತದೆ. ಈ ನಿಟ್ಟಿನಲ್ಲಿ ಎನ್‌ಜಿಟಿ ತರಾಟೆಯನ್ನು ಸರಕಾರ ಧನಾತ್ಮಕವಾಗಿ ತೆಗೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News