ಮೋದಿ ಹುಟ್ಟುವುದಕ್ಕೂ ಮೊದಲೇ ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದಿತ್ತು : ಕಾಂಗ್ರೆಸ್

Update: 2018-12-08 10:58 GMT

ಹೊಸದಿಲ್ಲಿ, ಡಿ.8: ದೈನಿಕ್ ಜಾಗರಣ್ ಮಾದ್ಯಮ ಸಮೂಹ ಆಯೋಜಿಸಿದ್ದ ಜಾಗರಣ್ ಫೋರಂ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ``ದೊಡ್ಡ ಉಪನಾಮೆಗಳನ್ನು ಹೊಂದಿದ್ದ ಜನರು ಅಧಿಕಾರಕ್ಕೆ ಬಂದು ಹೋದರೂ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿಲ್ಲ'' ಎಂದು ಹೇಳುವ ಮೂಲಕ ನೆಹರೂ-ಗಾಂಧಿ ಕುಟುಂಬವನ್ನು ಪರೋಕ್ಷವಾಗಿ ಟೀಕಿಸಿದ್ದಕ್ಕೆ ಇಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಮೋದಿ ಹೇಳಿಕೆಗೆ ಪ್ರತಿಯಾಗಿ “ಅವರು(ಮೋದಿ) ಹುಟ್ಟುವುದಕ್ಕೂ ಮೊದಲೇ ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದಿತ್ತು,'' ಎಂದು ಪ್ರಧಾನಿಗೆ ನೆನಪಿಸಿದ್ದಾರೆ.

ಪ್ರಧಾನಿಯ ಆರೋಪಗಳು ಆಧಾರರಹಿತ ಎಂದು ಹೇಳಿದ ಸುರ್ಜೇವಾಲ ದೇಶ ಕಾಂಗ್ರೆಸ್ ಆಡಳಿತದಲ್ಲಿ ಮಾಡಿದ ಸಾಧನೆಗಳನ್ನು ಪಟ್ಟಿ ಮಾಡಿದರು. ``ಭಾಕ್ರಾ ನಂಗಲ್ ಅಣೆಕಟ್ಟು ನಿರ್ಮಾಣ, ಜಮೀನ್ದಾರಿ ಪದ್ಧತಿಯ ರದ್ದತಿ, ಅಸ್ಪ್ರಶ್ಯತೆಯ ನಿಷೇಧ, ನವರತ್ನಗಳ ಸ್ಥಾಪನೆ, ಐಟಿ ಕ್ಷೇತ್ರದ ಅಭಿವೃದ್ಧಿ, ಉದಾರೀಕರಣ ಇತ್ಯಾದಿ ಕ್ರಮಗಳು ದೇಶದಲ್ಲಿ ಮಹತ್ತರ ಪರಿವರ್ತನೆ ತಂದಿವೆ''ಎಂದು ಅವರು ಹೇಳಿದರು.

``ಅವರು ಆರೆಸ್ಸೆಸ್ ಶಾಖಾದಲ್ಲಿ ಭಾಗವಹಿಸಿದ್ದಾಗ ದೇಶವು ಏಷ್ಯಾ ಉಪಖಂಡದ ಭೂಗೋಳಶಾಸ್ತ್ರವನ್ನೇ ಬದಲಾಯಿಸಿತ್ತು, ಅವರು ಗುಜರಾತ್ ರಾಜ್ಯವನ್ನು ಸೊಕ್ಕಿನಿಂದ ಆಳುತ್ತಿದ್ದಾಗ ಯುಪಿಎ ಸರಕಾರ 14 ಕೋಟಿ ಜನರನ್ನು ಬಡತನದ ರೇಖೆಗಿಂತ ಮೇಲೆತ್ತಿತ್ತು,'' ಎಂದು ಸುರ್ಜೇವಾಲ ನುಡಿದರು.

``ಕಾಂಗ್ರೆಸ್ ಇದನ್ನೆಲ್ಲಾ ಮಾಡಿಲ್ಲ, ಆದರೆ ಇದು 132 ಕೋಟಿ ಭಾರತೀಯರ 70 ವರ್ಷಕ್ಕೂ ಅಧಿಕ ವರ್ಷದ ಪರಿಶ್ರಮದ ಫಲವಾಗಿದೆ. ಭಾರತ ಈ 70 ವರ್ಷಗಳ ಅವಧಿಯ ಪಯಣಕ್ಕೆ ನೀವು ಅಗೌರವ ತೋರಿದ್ದೀರಿ. ನಿಮ್ಮ ಬಣ್ಣ ಬಯಲಾಗಿರುವುದರಿಂದ ಸುಳ್ಳು ಹೇಳುವ ಮೂಲಕ ನೀವು ದೇಶವನ್ನು ತಪ್ಪು ದಾರಿಗೆಳೆಯಲು ಸಾಧ್ಯವಿಲ್ಲ,''ಎಂದು ಸುರ್ಜೇವಾಲ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News