ರೈತರ ಹಿತಕಾಯಲು ಸರಕಾರ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರ್ಗಿ, ಡಿ. 8: ರಾಜ್ಯದಲ್ಲಿನ ಮೈತ್ರಿ ಸರಕಾರ ರೈತರ ಹಿತಕಾಯಲು ಬದ್ಧವಾಗಿದ್ದು, ಈಗಾಗಲೇ ಕೊಟ್ಟ ಮಾತಿನಂತೆ ಸಾಲಮನ್ನಾ ಮಾಡುವತ್ತ ದಿಟ್ಟಹೆಜ್ಜೆ ಇಟ್ಟಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶನಿವಾರ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ರೈತರ ಬೆಳೆ ಸಾಲಮನ್ನಾ ಯೋಜನೆಯಡಿಯಲ್ಲಿ ರೈತರಿಗೆ ‘ಋಣಮುಕ್ತ ಪ್ರಮಾಣ ಪತ್ರ’ ವಿತರಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಸಹಕಾರಿ ಸಂಘಗಳಲ್ಲಿ ರೈತರು ಪಡೆದಿದ್ದ ಬೆಳೆ ಸಾಲ 50ಸಾವಿರ ರೂ. ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿನ 2 ಲಕ್ಷ ರೂ.ವರೆಗಿನ ಸಾಲಮನ್ನಾ ಮಾಡಿದ್ದು, ಪ್ರಾಯೋಗಿಕ ಋಣಪತ್ರ ವಿತರಿಸಲಾಗುತ್ತಿದ್ದು ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.
ಕೇಂದ್ರದಲ್ಲಿದ್ದ ಅಂದಿನ ಮನಮೋಹನ್ ಸಿಂಗ್ ಸರಕಾರ 78 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಿ ಐತಿಹಾಸಿಕ ತಳಪಾಯ ಹಾಕಿಕೊಟ್ಟಿತ್ತು. ಅದನ್ನು ಸ್ಫೂರ್ತಿಯಾಗಿ ಪಡೆದ ಸಿದ್ದರಾಮಯ್ಯನವರು ರಾಜ್ಯದಲ್ಲಿಯೂ 8 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದರು.
ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ 48 ಸಾವಿರ ಕೋಟಿ ಸಾಲಮನ್ನಾ ಮಾಡುವ ತೀರ್ಮಾನ ಕೈಗೊಂಡಿದ್ದು, ಜಿಲ್ಲೆಯ 2.14 ಲಕ್ಷ ರೈತರು ಈ ಸಾಲಮನ್ನಾ ಯೋಜನೆಯ ಲಾಭ ಪಡೆಯಲು ಮೈತ್ರಿ ಸರಕಾರದ ದೃಢ ಸಂಕಲ್ಪವೆ ಕಾರಣ ಎಂದು ಅವರು ಇದೇ ವೇಳೆ ಬಣ್ಣಿಸಿದರು.
‘ಹೆಸರುಕಾಳು’ ಖರೀದಿ ಕೇಂದ್ರ ಸ್ಥಾಪನೆಯಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು ನೀಡಿದ ಸಹಕಾರವನ್ನು ಸ್ಮರಿಸಿದ ಪ್ರಿಯಾಂಕ್ ಖರ್ಗೆ, ಹೊಸದಿಲ್ಲಿಗೆ ನಿಯೋಗ ಕೊಂಡ್ಯೊಯ್ದು ಒತ್ತಡ ಹೇರಲು ಸಹಕರಿಸಿದ್ದರು ಎಂದು ಇದೇ ಸಂದರ್ಭದಲ್ಲಿ ನೆನಪು ಮಾಡಿಕೊಂಡರು.
ಇದೀಗ ತೊಗರಿ ಖರೀದಿ ಕೇಂದ್ರ ಸ್ಥಾಪಿಸುವ ಅಗತ್ಯವಿದ್ದು, ಜಿಲ್ಲಾಡಳಿತ ಈಗಾಗಲೇ 150ಕ್ಕೂ ಅಧಿಕ ಕೇಂದ್ರ ಸ್ಥಾಪನೆಗೆ ಉದ್ದೇಶ ಹೊಂದಿದೆ. ಕೇಂದ್ರ ಸರಕಾರದ ಅನುಮತಿ ಸಿಕ್ಕ ನಂತರ ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ನುಡಿದಂತೆ ನಡೆದಿದ್ದಾರೆ. ಹೀಗಾಗಿ ಇಂದು ರೈತರಿಗೆ ಋಣಮುಕ್ತ ಪತ್ರ ನೀಡಲು ಸಾಧ್ಯವಾಗಿದೆ. ರೈತರ ಸಾಲಮನ್ನಾ ವಿಚಾರದಲ್ಲಿ ಸರಕಾರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸೇಡಂ ಕ್ಷೇತ್ರದ ಶಾಸಕ ರಾಜ್‌ಕುಮಾರ ಪಾಟೀಲ್ ತೇಲ್ಕೂರು, ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ, ಜಿಲ್ಲಾ ಪಂ. ಸಿಇಓ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.