ಇಂದಿರಾ ಕ್ಯಾಂಟೀನ್‍ನಿಂದ ಹಸಿವು ಮುಕ್ತ ಕರ್ನಾಟಕದ ಕನಸು ಸಾಕಾರಗೊಳ್ಳುತ್ತಿದೆ: ಸಚಿವ ಜಾರ್ಜ್

Update: 2018-12-08 14:10 GMT

ಕೊಪ್ಪ, ಡಿ.8: ಹಸಿವು ಮುಕ್ತ ಕರ್ನಾಟಕ ಯೋಜನೆಯು ಇಂದಿರಾ ಕ್ಯಾಂಟಿನ್ ಮೂಲಕ ಸಾಕಾರಗೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಭಿಪ್ರಾಯಿಸಿದರು.

ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೇಸ್ ನೇತೃತ್ವದ ಈ ಹಿಂದಿನ ಸಿದ್ದರಾಮಯ್ಯ ಸರಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದರ ಜೊತೆಗೆ ಹಸಿವು ಮುಕ್ತ ಕರ್ನಾಟಕ ಆಗಬೇಕು ಎಂಬ ಉದ್ದೇಶ ಇಟ್ಟುಕೊಂಡು ಅನುಷ್ಠಾನಗೊಳಿಸಿದ ಇಂದಿರಾ ಕ್ಯಾಂಟೀನ್ ಕಾರ್ಯಕ್ರಮ ಬಡವರ ಆಶಾಕಿರಣವಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಬಡವರ ಏಳಿಗೆಗಾಗಿ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದರು. ರೂ. 5ಕ್ಕೆ ತಿಂಡಿ ಹಾಗೂ ರೂ. 10ಕ್ಕೆ ಊಟ ನೀಡುವ ಮೂಲಕ ಕಡಿಮೆ ಬೆಲೆಯಲ್ಲಿ ತಿಂಡಿ ಊಟ ನೀಡುವ ಯೋಜನೆಯನ್ನು ಅವರ ಹೆಸರಿನಲ್ಲೇ ಜಾರಿಗೆ ತರಲಾಗಿದೆ. ಪ್ರಾರಂಭದಲ್ಲಿ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, 200 ಕಡೆ ಯಶಸ್ವಿಯಾಗಿರುವ ಇಂದಿರಾ ಕ್ಯಾಂಟೀನ್‍ಗೆ ಈಗ ರಾಜ್ಯದ ಎಲ್ಲೆಡೆಯಿಂದ ಬೇಡಿಕೆ ಬರುತ್ತಿದೆ. ಈಗ ಚಿಕ್ಕಮಗಳೂರು ಜಿಲ್ಲೆಯ ಏಳು ತಾಲೂಕುಗಳಲ್ಲೂ ಪ್ರಾರಂಭವಾಗಿದೆ. ಗುಣಮಟ್ಟದ ಊಟ ತಿಂಡಿ ಸಿಗುವಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಟಿ.ಡಿ..ರಾಜೇಗೌಡ, ಇಂದಿರಾ ಕ್ಯಾಂಟಿನ್ ಸಿದ್ದರಾಮಯ್ಯ ಸರಕಾರ ಕನಸಿನ ಕಾರ್ಯಕ್ರಮ. ಜಾಗದ ಲಭ್ಯತೆಯ ಕೊರತೆಯಿಂದ ಸ್ವಲ್ಪ ವಿಳಂಭವಾಗಿ ಪ್ರಾರಂಭವಾಗಿದೆ. ಶುಚಿ ರುಚಿಯಾದ ಗುಣಮಟ್ಟದ ಆಹಾರ ಇಂದಿರಾ ಕ್ಯಾಂಟೀನ್‍ನಲ್ಲಿ ಕಡಿಮೆ ದರದಲ್ಲಿ ಸಿಗುತ್ತಿರುವುದು ಬಡವರಿಗೆ ಹೆಚ್ಚು ಅನುಕೂಲವಾಗಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ನಮ್ಮ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ಕೆಲಸ ಮಾಡಿಕೊಡುವ ಒಳ್ಳೆಯ ಮನಸ್ಸಿನ ಸಚಿವರು ಸಿಕ್ಕಿದ್ದಾರೆ. ಅತಿವೃಷ್ಠಿ ಪರಿಹಾರಕ್ಕೆ ಜಿಲ್ಲೆಗೆ ರೂ. 25 ಕೋಟಿ ಮಂಜೂರಾಗಿದ್ದು ಶೃಂಗೇರಿ ಕ್ಷೇತ್ರಕ್ಕೆ ರೂ. 12.5 ಕೋಟಿ ಬಿಡುಗಡೆಯಾಗಿದೆ. ರಸ್ತೆ ಅಭಿವೃದ್ಧಿಗೆ ರೂ. 5 ಕೋಟಿ ಬಿಡುಗಡೆಯಾಗಿದೆ. ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣನವರು ಶೃಂಗೇರಿ ಕ್ಷೇತ್ರದ ಮೇಲೆ ವಿಶೇಷ ಕಾಳಜಿಯಿಟ್ಟು ರೂ. 30 ಕೋಟಿ ಅನುದಾನ ನೀಡಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ರೆವಿನ್ಯೂ, ಸೊಪ್ಪಿನಬೆಟ್ಟ, ಗೋಮಾಳ ಜಾಗದಲ್ಲಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಈಗಾಗಲೇ ಕೆಲವು ಪ್ರಸ್ತಾವನೆಗಳಿಗೆ ಮಂಜೂರಾತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಮಾತನಾಡಿ, ಎಲ್ಲಾ ಜನಪ್ರತಿನಿಧಿಗಳನ್ನು ಒಟ್ಟುಗೂಡಿಸಿ ಕಾರ್ಯಕ್ರಮ ನಡೆಸುತ್ತಿರುವುದು ತುಂಬಾ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿಯೂ ಅಧಿಕಾರಿಗಳು ಇದನ್ನು ಮುಂದುವರಿಸಿಕೊಂಡು ಹೋದರೆ ಅಭಿವೃದ್ಧಿ ಕೆಲಸಗಳು ಉತ್ತಮವಾಗಿ ನಡೆಯುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಒಲೆ ಮತ್ತು ಸಿಲಿಂಡರ್, ಫಾರಂ 53 ಮತ್ತು ಫಾರಂ 94(ಸಿ) ಅಡಿ ಜಮೀನು ಮತ್ತು ನಿವೇಶನಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಪಟ್ಟಣ ಪಂಚಾಯತ್ ಸದಸ್ಯ ಕೆ.ಎಸ್. ಹರೀಶ್ ಭಂಡಾರಿ ಪ್ರಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಜಿಲ್ಲಾ ಪಂ. ಸದಸ್ಯ ಎಸ್.ಎನ್. ರಾಮಸ್ವಾಮಿ, ದಿವ್ಯ ದಿನೇಶ್, ತಾಲೂಕು ಪಂ. ಅಧ್ಯಕ್ಷೆ ಜಯಂತಿ ನಾಗರಾಜ್, ಪಟ್ಟಣ ಪಂ. ಉಪಾಧ್ಯಕ್ಷ ಎ. ದಿವಾಕರ್, ಸ್ಥಾಯೀ ಸಮಿತಿ ಅಧ್ಯಕ್ಷೆ ವಸಂತಿ ಪಾಂಡುರಂಗ ಸದಸ್ಯರಾದ ಶ್ರೀನಿವಾಸ ಎಸ್. ಶೆಟ್ಟಿ, ಕೆ.ಎಸ್. ಸುಬ್ರಹ್ಮಣ್ಯ ಶೆಟ್ಟಿ, ಆಶಾ ಪೆರೀಸ್, ವಿಜಯಕುಮಾರ್, ಸಿ.ಕೆ. ಮಾಲತಿ, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಸಿಇಒ ಸತ್ಯಭಾಮ, ತಹಶೀಲ್ದಾರ್ ಟಿ. ತನಜು ಸವದತ್ತಿ, ಇಒ ಕೆ. ಗಣಪತಿ, ಪ.ಪಂ. ಮುಖ್ಯಾಧಿಕಾರಿ ಶಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News