ಚಳಿಗಾಲದ ಅಧಿವೇಶನ ಕಲಾಪಕ್ಕೆ ಪ್ರತಿಭಟನೆಯ ಕಾವು
ಬೆಳಗಾವಿ, ಡಿ. 9: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಇದೇ ಸೋಮವಾರದಿಂದ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಸರಕಾರದ ವಿರುದ್ಧ ಕಬ್ಬು ಬೆಳೆಗಾರರು, ವಿಪಕ್ಷ ಬಿಜೆಪಿ, ಭಡ್ತಿ ಮೀಸಲಾತಿಗೆ ಆಗ್ರಹಿಸಿ ಪರಿಶಿಷ್ಟ ನೌಕರರು ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿಭಟನೆಯ ಬಿಸಿಯೂ ಚಳಿಗಾಲದ ಅಧಿವೇಶನಕ್ಕೆ ಬಲವಾಗಿಯೇ ತಟ್ಟಲಿದೆ.
ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಬಾಕಿ ಕೊಡಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಹೋರಾಟಕ್ಕೆ ಸಜ್ಜಾಗಿದೆ. ಈ ನಡುವೆ ಕಬ್ಬಿನ ಬಾಕಿ, ಸಾಲಮನ್ನಾ, ಬರ-ನೆರೆ ಸೇರಿದಂತೆ ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ 1ಲಕ್ಷ ಮಂದಿ ರೈತರನ್ನು ಸೇರಿಸಿ ಬಹಿರಂಗ ಸಮರಕ್ಕೆ ವಿಪಕ್ಷ ಬಿಜೆಪಿ ಸನ್ನದ್ಧವಾಗಿದೆ.
ಮತ್ತೊಂದೆಡೆ ಭಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಒತ್ತಾಯಿಸಿ ಪರಿಶಿಷ್ಟ ನೌಕರರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೀದಿಗಿಳಿಯಲು ಮುಂದಾಗಿವೆ. ಈ ಮಧ್ಯೆ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಡಿ.11ಕ್ಕೆ ಸುವರ್ಣ ವಿಧಾನಸೌಧ ಮುತ್ತಿಗೆಗೆ ತೀರ್ಮಾನಿಸಿದೆ. ಇದರ ನಡುವೆಯೇ ಎಂಇಎಸ್(ಮಹಾರಾಷ್ಟ್ರ ಏಕೀಕರಣ ಸಮಿತಿ) ಮಹಾ ಮೇಳವಾ ಕೂಡ ನಡೆಸಲಿದೆ ಎಂದು ತಿಳಿದುಬಂದಿದೆ.
ರೈತರ ಸಮಾವೇಶ: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ತಮ್ಮ ಅಸ್ತಿತ್ವ ಪ್ರದರ್ಶನಕ್ಕೆ ಬಿಜೆಪಿ ಡಿ.10ರಂದು ಸುವರ್ಣ ವಿಧಾನಸೌಧದ ಸಮೀಪದಲ್ಲಿನ ಅಲರವಾಡ ಕ್ರಾಸ್ ಬಳಿ ಬೃಹತ್ ರೈತರ ಸಮಾವೇಶ ನಡೆಸಲಿದೆ.
ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧೆಡೆಗಳಿಂದ 1ಲಕ್ಷ ಮಂದಿ ರೈತರನ್ನು ಸೇರಿಸಲು ಸಿದ್ಧತೆ ನಡೆಸಿದ್ದು, ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
‘ಒಳ ಮೀಸಲಾತಿ ವರ್ಗಿಕರಣ ಸಂಬಂಧ ನ್ಯಾ.ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಮಾಡಬೇಕೆಂದು ಆಗ್ರಹಿಸಿ ಏಕೈಕ ಬೇಡಿಕೆಯನ್ನಿಟ್ಟುಕೊಂಡು ಸುದೀರ್ಘ ಹೋರಾಟ ಮಾಡುತ್ತಿದ್ದೇವೆ. ಚಳಿಗಾಲದ ಅಧಿವೇಶದ ವೇಳೆಯೂ ಮೈತ್ರಿ ಸರಕಾರ ನೀಡಿದ ಭರವಸೆ ಈಡೇರಿಸಲು ಆಗ್ರಹಿಸಿ ಹೋರಾಟ ಮಾಡಲಿದ್ದೇವೆ’
-ಕೇಶವಮೂರ್ತಿ, ಗೌರವಾಧ್ಯಕ್ಷ ,ಮಾದಿಗ ಮೀಸಲಾತಿ ಹೋರಾಟ ಸಮಿತಿ