ಜಿಪಂ ಅಧ್ಯಕ್ಷೆ ದಲಿತೆ ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟಿನ್ ಉದ್ಘಾಟನೆಗೆ ಆಹ್ವಾನವಿಲ್ಲ: ಬಿಜೆಪಿ ಎಸ್ಸಿ ಮೋರ್ಚಾ ಆರೋಪ
ಚಿಕ್ಕಮಗಳೂರು, ಡಿ.8: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದಲಿತ ಸಮುದಾಯದ ಮಹಿಳೆ ಎಂಬ ಕಾರಣಕ್ಕೆ ಶುಕ್ರವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಇಂದಿರಾಕ್ಯಾಂಟಿನ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಅವಮಾನಿಸಲಾಗಿದೆ. ಸರಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಂತೆ ಆಯೋಜನೆ ಮಾಡಲಾಗಿದೆ. ದಲಿತ ಸಮುದಾಯದ ಮಹಿಳೆ ಎಂಬ ಕಾರಣಕ್ಕೆ ಕಾಂಗ್ರೆಸ್ ಮುಖಂಡರು ಪೊಲೀಸರ ಮೇಲೆ ಒತ್ತಡ ಹೇರಿ ಬಂಧಿಸಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಜೆ.ಡಿ.ಲೋಕೇಶ್ ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಶುಕ್ರವಾರ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟಿನ್ ಸರಕಾರಿ ಕಾರ್ಯಕ್ರಮವಾಗಿತ್ತು. ಸರಕಾರಿ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸುವ ನಿಯಮವಿದೆ. ಆದರೆ ಕಾಂಗ್ರೆಸ್ ಮುಖಂಡರ ಚಿತಾವಣೆಯಿಂದಾಗಿ ಈ ಕಾರ್ಯಕ್ರಮಕ್ಕೆ ತಾಪಂ, ಜಿಪಂ ಜನಪ್ರತಿನಿಧಿಗಳನ್ನು ಆಹ್ವಾನಿಸದೇ ತಾರತಮ್ಯ ನೀತಿ ಅನುಸರಿಸಿದ್ದಾರೆ. ಅದರಲ್ಲೂ ರಾಜ್ಯ ಮಟ್ಟದ ಶ್ರೇಯಾಂಕ ಹೊಂದಿರುವ ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅವರು ಆರೋಪಿಸಿದರು.
ಉಸ್ತುವಾರಿ ಸಚಿವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಜಿಪಂ ಅಧ್ಯಕ್ಷರನ್ನು ಸೌಜನ್ಯಕ್ಕಾದರೂ ಆಹ್ವಾನಿಸಬೇಕಿತ್ತು. ಆದರೆ ಕಾಂಗ್ರೆಸ್ ಮುಖಂಡರು ಜಿಪಂ ಅಧ್ಯಕ್ಷೆ ದಲಿತ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕೆ ಆಹ್ವಾನ ನೀಡಿಲ್ಲ. ಇಂದಿರಾ ಕ್ಯಾಂಟಿನ್ ಉದ್ಘಾಟನಾ ಕಾರ್ಯಕ್ರಮ ತಮ್ಮ ಸ್ವಂತ ಕಾರ್ಯಕ್ರಮ ಎಂಬಂತೆ ಭಾವಿಸಿದ್ದ ಕಾಂಗ್ರೆಸ್ ಮುಕಂಡರು ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಇದನ್ನು ಪ್ರಶ್ನಿಸಿ ಇಂದಿರಾ ಕ್ಯಾಂಟಿನ್ ಎದುರು ಮೌನ ಧರಣಿ ನಡೆಸಿದ ಸುಜಾತಾ ಅವರ ವಿರುದ್ಧ ಕಾಂಗ್ರೆಸ್ ಮುಖಂಡರು ಧಿಕ್ಕಾರದ ಘೋಷಣೆ ಕೂಗಿದ್ದಾರೆಂದರು.
ಮೌನ ಧರಣಿ ಮಾಡುತ್ತಿದ್ದ ಜಿಪಂ, ತಾಪಂ ಅಧ್ಯಕ್ಷರೂ ಸೇರಿದಂತೆ ಸದಸ್ಯರನ್ನು ಪೊಲೀಸರ ಮೂಲಕ ಬಂಧಿಸಲಾಗಿದೆ. ದೇಶಕ್ಕೆ ಸಂವಿಧಾನ ರೂಪಿಸಿದ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದೇ ದಲಿತ ಮಹಿಳೆ ಎಂಬುದನ್ನೂ ಮರೆತು ಜಿಪಂ ಅಧ್ಯಕ್ಷೆಯನ್ನು ಬಂಧಿನಕ್ಕೊಳಪಡಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿ.ಟಿ.ರವಿ ವಿರುದ್ಧವೂ ಧಿಕ್ಕಾರ ಕೂಗಿ ಅಪಮಾನ ಮಾಡಿದ್ದಾರೆ. ಪೊಲೀಸರು ದುಂಡಾವರ್ತನೆ ತೋರಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಬಂಧಿಸುವುದರ ಬದಲಾಗಿ, ಜಿಪಂ, ತಾಪಂ ಅಧ್ಯಕ್ಷರು ಹಾಗೂ ಸದಸ್ಯರನ್ನು ಬಂಧಿಸಿದ್ದಾರೆಂದು ಆರೋಪಿಸಿದ ಅವರು, ಕಾರ್ಯಕ್ರಮದ ವೇಳೆ ದುಂಡಾವರ್ತನೆ ತೋರಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ವಿರುದ್ಧ ಕೂಡಲೇ ಜಿಲ್ಲಾಡಳಿತ ಕಾನೂನು ಕ್ರಮ ಜರಗಿಸಬೇಕು. ತಪ್ಪಿದಲ್ಲಿ ಘಟನೆ ಸಂಬಂಧ ರಾಜ್ಯಪಾಲರು ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾದ ಉಪಾಧ್ಯಕ್ಷ ಹಂಪಯ್ಯ, ಕಾರ್ಯದರ್ಶಿ ವೆಂಕಟೇಶ್ ಮುಖಂಡರಾದ ರಾಜ್‍ಕುಮಾರ್, ಪ್ರದೀಪ್, ನಂಜುಂಡಪ್ಪ ಉಪಸ್ಥಿತರಿದ್ದರು.