ಸರಕಾರ ಕ್ವಿಂಟಲ್ ತೊಗರಿಗೆ 7,675 ರೂ.ನೀಡಲಿ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ
ಕಲಬುರ್ಗಿ, ಡಿ.8: ಪ್ರತಿ ಕ್ವಿಂಟಲ್ ತೊಗರಿಗೆ 7,675 ರೂ. ನೀಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಒತ್ತಾಯಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಕೊರತೆಯಿಂದ ತೊಗರಿ ಇಳುವರಿಯಲ್ಲಿ ತೀವ್ರ ಕುಸಿತ ಕಂಡಿದೆ. ಜತೆಗೆ ಮಾರುಕಟ್ಟೆಯಲ್ಲಿಯೂ ದರ ಕುಸಿತಗೊಂಡಿದ್ದು, ರೈತ ಸಮುದಾಯಕ್ಕೆ ಬರೆ ಎಳೆದಂತಾಗಿದೆ. ಹೀಗಾಗಿ ಸರಕಾರ ಮಧ್ಯ ಪ್ರವೇಶ ಮಾಡಿ ಬೆಂಬಲ ಬೆಲೆಯ ಜತೆಗೆ ರಾಜ್ಯ ಮತ್ತು ಕೇಂದ್ರ ಸರಕಾರ ತಲಾ ಸಾವಿರ ರೂಪಾಯಿ ಪ್ರೋತ್ಸಾಹ ಧನ ಸೇರಿ ಪ್ರತಿ ಕ್ವಿಂಟಾಲ್ ತೊಗರಿಗೆ 7,675 ದರ ನೀಡಬೇಕೆಂದು ಒತ್ತಾಯಿಸಿದರು.
ವಿದೇಶಗಳಿಂದ ಆಮದು ಮಾಡಿಕೊಳ್ಳುವ ತೊಗರಿಗೆ ಶೇ.35 ರಷ್ಟು ತೆರಿಗೆ ವಿಧಿಸಿದರೆ ಸ್ಥಳೀಯ ತೊಗರಿಗೆ ಬೆಲೆ ಬರಲಿದ್ದು, ದೇಶಕ್ಕೆ ಆಮದಾಗುವ ತೊಗರಿ ಮೇಲೆ ಕೇಂದ್ರ ಸರಕಾರ ಸುಂಕ ಹೆಚ್ಚಿಸುವಂತೆ ಆಗ್ರಹಿಸಿದರು.
ಡಿ.12 ರಂದು ರೈತ ಸಮಾವೇಶ: ಡಿ.12ರಂದು ಮಧ್ಯಾಹ್ನ 12ಕ್ಕೆ ವಿಭಾಗಮಟ್ಟದ ರೈತ ಸಮಾವೇಶವನ್ನು ನಗರದ ಜಗತ್ ವೃತ್ತದ ಬಳಿ ಹಮ್ಮಿಕೊಳ್ಳಲಾಗಿದೆ. ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ಡಾ.ಅಶೋಕ ಧಾವಲೆ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಸಮಾವೇಶದಲ್ಲಿ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮಾನ್ಪಡೆ ತಿಳಿಸಿದರು.