ಕುಡಿಯುವ ನೀರಿಗಿಂತ ಬೇರೆ ಯಾವುದೇ ಯೋಜನೆ ಮುಖ್ಯವಲ್ಲ: ದೇವನೂರು ಮಹಾದೇವ

Update: 2018-12-08 17:33 GMT

ಮೈಸೂರು,ಡಿ.8: ಕುಡಿಯುವ ನೀರಿಗಿಂತ ಮತ್ಯಾವುದೇ ಯೋಜನೆ ಮುಖ್ಯವಲ್ಲ. ಹಾಗಾಗಿ ಕೆ.ಆರ್.ಎಸ್ ಉಳಿವಿಗಾಗಿ ಎಲ್ಲರೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸಾಹಿತಿ ದೇವನೂರು ಮಹಾದೇವ ಅಭಿಪ್ರಾಯಿಸಿದರು.

ನಗರದ ಹುಣಸೂರು ರಸ್ತೆಯಲ್ಲಿರುವ ಕೃಷಿ ಮಾರುಕಟ್ಟೆ ಸಭಾಂಗಣದಲ್ಲಿ ಶನಿವಾರ ಕೆ.ಆರ್.ಎಸ್. ಉಳಿವಿಗಾಗಿ ಪ್ರಗತಿಪರರು ಪರಿಸರವಾದಿಗಳು, ರೈತರು, ಹೋರಾಟಗಾರರ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೈಸೂರು, ಮಂಡ್ಯ, ಬೆಂಗಳೂರು ಭಾಗದ ಕುಡಿಯುವ ನೀರು, ಕೃಷಿ, ಕೈಗಾರಿಕೆ ಸೇರಿದಂತೆ ಹಲವಾರು ಯೋಜನೆಗಳಿಗೆ ಕೆ.ಆರ್.ಎಸ್ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಈಗ ಕೆ.ಆರ್.ಎಸ್‍ಗೂ ಗಂಡಾಂತರ ಬಂದೊದಗಿದ್ದು, ಸುತ್ತಲೂ ಗಣಿಗಾರಿಕೆ ನಡೆಯುತ್ತಿದೆ. ಡಿಸ್ನಿಲ್ಯಾಂಡ್ ಮಾದರಿ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಇದರ ವಿರುದ್ಧ ವಿದ್ಯಾರ್ಥಿಗಳು, ರೈತರು, ಪರಿಸರವಾದಿಗಳು, ಪ್ರಗತಿಪರರು ಸೇರಿದಂತೆ ಸಾರ್ವಜನಿಕರು ಹೋರಾಟ ಮಾಡಬೇಕಾಗಿದೆ. ನಮಗೆ ಯಾವುದೇ ಪಾರ್ಕ್‍ನ ಅವಶ್ಯಕತೆ ಇಲ್ಲ. ಪ್ರತಿ ಹಳ್ಳಿಗಳಿಗೂ ತೆರಳಿ ಕೆ.ಆರ್.ಎಸ್.ನ ಸ್ಥಿತಿಗತಿಗಳ ಕುರಿತು ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಜನರನ್ನು ಜಾಗೃತಿಗೊಳಿಸಬೇಕಿದೆ ಎಂದು ಹೇಳಿದರು.

ನಮಗೆ ಕುಡಿಯುವ ನೀರು ಮುಖ್ಯ. ಅದು ಬಿಟ್ಟು ಮತ್ತೆ ಯಾವುದೇ ಯೋಜನೆ ಮುಖ್ಯವಲ್ಲ. ಕೆ.ಆರ್.ಎಸ್ ಸುತ್ತಮುತ್ತ ಹಲವಾರು ಗಣಿಗಾರಿಕೆಗಳು ನಡೆಯುತ್ತಿದೆ. ಜೊತೆಗೆ ಡಿಸ್ನಿಲ್ಯಾಂಡ್ ಪ್ರಾರಂಭ ಮಾಡಲು ಸರ್ಕಾರ ಮುಂದಾಗಿದೆ. ಕುಡಿಯುವ ನೀರು ಬಿಟ್ಟು ಬೇರೇನು ಅಲ್ಲಿ ನಿರ್ಮಾಣವಾಗಬಾರದು. ಕೆ.ಆರ್.ಎಸ್. ಒಂದು ಪ್ರಾಂತ್ಯಕ್ಕೆ ಮೀಸಲಾಗಿಲ್ಲ. ಈ ನೀರನ್ನು  ರಾಜ್ಯದ ಎಲ್ಲಾಕಡೆಗಳಿಗೂ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಎಲ್ಲರೂ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News