ಮೈಸೂರಿನ ನಿವೃತ್ತ ಸರಕಾರಿ ವೈದ್ಯರಿಗೆ ಧನ್ಯವಾದ ತಿಳಿಸಿದ ಏರ್ ಫ್ರಾನ್ಸ್
ಮೈಸೂರು, ಡಿ.8: ಪ್ಯಾರಿಸ್ ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪ್ರಾಣ ರಕ್ಷಿಸಿದ 69 ವರ್ಷದ ಮೈಸೂರಿನ ವೈದ್ಯರಿಗೆ ಏರ್ ಫ್ರಾನ್ಸ್ ಧನ್ಯವಾದಗಳನ್ನು ಸಲ್ಲಿಸಿದೆ. ಕಳೆದ ತಿಂಗಳು ಈ ಘಟನೆ ನಡೆದಿತ್ತು.
ಪ್ರಭುಲಿಂಗಸ್ವಾಮಿ ಎಂಬ ನಿವೃತ್ತ ಸರಕಾರಿ ವೈದ್ಯರು ಕುವೆಂಪುನಗರದಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಅವರು ನವೆಂಬರ್ 13ರಂದು ಪ್ಯಾರಿಸ್ ನಿಂದ ಬೆಂಗಳೂರಿಗೆ ಏರ್ ಫ್ರಾನ್ಸ್ ವಿಮಾನದಲ್ಲಿ ಹಿಂದಿರುಗುತ್ತಿದ್ದರು. ವಿಮಾನ ಪ್ರಯಾಣದ ವೇಳೆ ಹಿರಿಯ ವ್ಯಕ್ತಿಯೊಬ್ಬರು ಕುಸಿದು ಬಿದ್ದಿದ್ದರು. ಕೂಡಲೇ ವಿಮಾನದ ಸಿಬ್ಬಂದಿ ಡಾ.ಪ್ರಭುಲಿಂಗಸ್ವಾಮಿಯವರ ನೆರವು ಕೋರಿದ್ದರು.
“ಆ ವ್ಯಕ್ತಿಯಲ್ಲಿ ಹೃದಯ ಬಡಿತವೂ ಇರಲಿಲ್ಲ, ಉಸಿರಾಟವೂ ಇರಲಿಲ್ಲ” ಎಂದು ಪ್ರಭುಲಿಂಗಸ್ವಾಮಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಮೈಸೂರಿನ ವೈದ್ಯ ಪ್ರಭುಲಿಂಗಸ್ವಾಮಿ ಹಿರಿಯ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಕೆಲ ಗಂಟೆಗಳ ನಂತರ ವ್ಯಕ್ತಿ ಮಾತನಾಡಿದ್ದು, ಜ್ಯೂಸ್ ಕುಡಿದಿದ್ದಾರೆ. ವಿಮಾನ ಬೆಂಗಳೂರಿಗೆ ತಲುಪುವವರೆಗೆ ಅವರ ಮೇಲೆ ನಿಗಾ ಇರಿಸಲಾಗಿದ್ದು, ನಂತರ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
“ವಿಮಾನದ ಕ್ಯಾಪ್ಟನ್ ನನ್ನ ಬಳಿ ಬಂದು ಧನ್ಯವಾದ ತಿಳಿಸಿದರು. ಮರುದಿನ ಏರ್ ಫ್ರಾನ್ಸ್ ಪ್ಯಾಸೆಂಜರ್ ಮೆಡಿಕಲ್ ಸರ್ವಿಸ್ ನಿಂದ ಕರೆ ಬಂದಿತ್ತು. ನನ್ನ ಸಹಾಯಕ್ಕಾಗಿ ಅವರೂ ಧನ್ಯವಾದ ತಿಳಿಸಿದರು. ಇಷ್ಟೇ ಅಲ್ಲದೆ ಏರ್ ಲೈನ್ಸ್ ನನಗೆ 100 ಯೂರೋಗಳ ವೋಚರ್ ನೀಡಿದೆ” ಎಂದು ಡಾ. ಪ್ರಭುಲಿಂಗಸ್ವಾಮಿ ಹೇಳಿದ್ದಾರೆ.