ಪ್ರಗತಿಪರರು ಪೂರ್ವಾಪರ ಚರ್ಚಿಸದೆ ವಿರೋಧಿಸುವುದು ಸರಿಯಲ್ಲ: ಸಚಿವ ಸಾ.ರಾ.ಮಹೇಶ್
ಮೈಸೂರು,ಡಿ.8: ಸರ್ಕಾರ ತೆಗೆದುಕೊಳ್ಳುವ ಕಾರ್ಯಕ್ರಮವನ್ನು ಪೂರ್ವಾಪರ ಚರ್ಚಿಸದೆ ಪ್ರಗತಿಪರರು ವಿರೋಧಿಸುವದು ಸರಿಯಲ್ಲ ಎಂದು ಪ್ರವಾಸೋಧ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆ.ಆರ್.ನಗರ ತಾಲೂಕು ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭದ ಕುರಿತು ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೆ.ಎರ್.ಎಸ್.ನಲ್ಲಿ ನಿರ್ಮಾಣ ಮಾಡಲು ಮುಂದಾಗಿರುವ ಡಿಸ್ನಿಲ್ಯಾಂಡ್ ಮಾದರಿ ಪಾರ್ಕ್ ನಿರ್ಮಾಣ ವಿರೋಧಿಸಿ ಪ್ರಗತಿಪರರು ಇಂದು ಸಭೆ ನಡೆಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಆಕ್ರೋಶಿತರಾದ ಸಚಿವರು, ಪ್ರಗತಿಪರರು ಎನ್ನುವವರು ಮೊದಲು ಕಾರ್ಯಕ್ರಮ ಏನು, ಯಾವ ಯೋಜನೆ ಬರುತ್ತದೆ, ಇದರ ಅಭಿವೃದ್ದಿ ಏನು ಎಂಬುದನ್ನು ಅರ್ಥಮಾಡಿಕೊಳ್ಳಲಿ. 25 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಫೌಂಟನ್ ಅನ್ನು ಹೊರರಾಜ್ಯಗಳಿಂದ ಜನರು ಹಣ ನೀಡಿ ಬಂದು ನೋಡುತ್ತಾರೆ. ವಾಪಸ್ ಹೋಗುವ ಸಂದಂರ್ಭದಲ್ಲಿ ಅವರು ಏನು ಮಾತನಾಡಿಕೊಂಡು ಹೋಗುತ್ತಾರೆ ಎಂಬುದನ್ನು ಪ್ರಗತಿಪರರು ಹೋಗಿ ಕೇಳಲಿ ಎಂದು ಹೇಳಿದರು.
ಪ್ರಗತಿಪರರು ವಿರೋಧ ಮಾಡುವುದನ್ನು ನಿಲ್ಲಿಸಿ. ಏನು ಮಾಡಬೇಕು ಯಾವ ರೀತಿ ಮಾಡಬೇಕು ಎಂಬ ಸಲಹೆಗಳನ್ನು ಕೊಡಲಿ ಸ್ವೀಕರಿಸೋಣ. ಅದು ಬಿಟ್ಟು ಪೂರ್ವಾಪರ ಚರ್ಚಿಸದೆ ಏಕಾ ಏಕಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಕೆ.ಆರ್.ಎಸ್ ನ ಒಟ್ಟು ವಿಸ್ತೀರ್ಣ 400 ಎಕರೆ. ಈಗ ಗಾರ್ಡನ್ ಸೇರಿ 76 ಎಕರೆ ಪ್ರದೇಶವನ್ನಷ್ಟೇ ಬಳಸಿಕೊಳ್ಳಲಾಗಿದೆ. ಇನ್ನುಳಿದ 325 ಎಕರೆ ಅಭಿವೃದ್ಧಿ ಹೊಂದದೆ ಹಾಗೆ ಉಳಿದಿದೆ. ಈ ಪ್ರದೇಶದಲ್ಲಿ ಉತ್ತಮ ಗಾರ್ಡನ್ ಮಾಡಿ ಅಭಿವೃದ್ಧಿ ಪಡಿಸಿ ಉದ್ಯೋಗ ಕೊಡಬೇಕು ಎಂದು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ ಎಂದರು.