×
Ad

ಸರಕಾರ ವಿರುದ್ಧದ ಬಿಜೆಪಿ ಹೋರಾಟಕ್ಕೆ ಕೈಜೋಡಿಸಲು ಬಿ.ಎಸ್.ಯಡಿಯೂರಪ್ಪ ಮನವಿ

Update: 2018-12-09 19:35 IST

ಬೆಳಗಾವಿ, ಡಿ. 9: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ವಿರುದ್ಧ ರಣತಂತ್ರ ರೂಪಿಸಿದ್ದು, ಅಧಿಕಾರ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ನಾಳೆ (ಡಿ.10) ರೈತರ ಬೃಹತ್ ಸಮಾವೇಶನವನ್ನು ಬಿಜೆಪಿಯಿಂದ ಏರ್ಪಡಿಸಲಾಗಿದೆ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಬಾಕಿ ಕೊಡಿಸುವುದು, ರೈತರ ಸಾಲಮನ್ನಾ, ಆತ್ಮಹತ್ಯೆಗೆ ಶರಣಾದ ರೈತರಿಗೆ ಪರಿಹಾರ ವಿತರಣೆ ಹಾಗೂ ಬರ ನಿರ್ವಹಣೆಯಲ್ಲಿ ವೈಫಲ್ಯ ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಸುವ ಮೂಲಕ ಸರಕಾರದ ಗಮನ ಸೆಳೆಯಲಿದ್ದೇವೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಕೇವಲ ಶೋಕಿಗಾಗಿ ಭತ್ತ ಕಟಾವು ಮಾಡಿದ್ದಾರೆ. ಅವರಿಗೆ ವಿರೋಧ ಪಕ್ಷದ ಬಗ್ಗೆ ಕನಿಷ್ಠ ಗೌರವವೇ ಇಲ್ಲ. ಬಿಜೆಪಿ ಮತ್ತು ಮಾಧ್ಯಮಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ ಬಿಎಸ್‌ವೈ, ಯಾವುದೇ ಕ್ಷೇತ್ರಕ್ಕೆ ಭೇಟಿ ನೀಡದೆ ನಿರ್ಲಕ್ಷ ವಹಿಸಿದ್ದಾರೆ.

ಆದರೆ, ಅಧಿಕೃತ ವಿರೋಧ ಪಕ್ಷವಾಗಿ ಬಿಜೆಪಿ ಐದು ತಂಡಗಳಾಗಿ ರಾಜ್ಯದ ಬರ ಪೀಡಿತ ಪ್ರದೇಶಗಳನ್ನು ಭೇಟಿ ನೀಡಿ ಪರಿಶೀಲಿಸಿದೆ. ಮಂಡ್ಯ ಜಿಲ್ಲೆಯಲ್ಲಿ 30 ಮಂದಿ ಸಾವಿಗೀಡಾಗಿದ್ದು ಅವರಿಗೆ ಪರಿಹಾರ ನೀಡಿದ್ದಾರೆ. ಆದರೆ, ಯರಗಟ್ಟಿಯಲ್ಲಿ 6 ಮಂದಿ ರೈತ ಮಹಿಳೆಯರು ಮೃತಪಟ್ಟರೂ ಪರಿಹಾರ ನೀಡಿಲ್ಲ ಎಂದು ದೂರಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲವನ್ನು ಬಿಟ್ಟು ನಿಂತಿದ್ದು, ಅವರು ಕೇವಲ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಿಗಷ್ಟೇ ಸೀಮಿತರಾಗಿದ್ದಾರೆ. ಕೇವಲ ಸುಳ್ಳು ಭರವಸೆಗಳ ಮೂಲಕ ಜನರನ್ನು ಮರಳು ಮಾಡುತ್ತಿದ್ದಾರೆ. ರೈತರ ಸಾಲಮನ್ನಾ ಸೇರಿ ಯಾವುದೇ ಕಾರ್ಯರೂಪಕ್ಕೆ ಬಂದಿಲ್ಲ.

ಹೀಗಾಗಿ ನಾಳೆ ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ರೈತರ ಸಮಾವೇಶನಕ್ಕೆ ರೈತರು, ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಆಗಮಿಸಬೇಕು. ರಾಜ್ಯದಲ್ಲಿನ ಮೈತ್ರಿ ಸರಕಾರ ತೊಲಗಿಸುವ ಬಿಜೆಪಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಯಡಿಯೂರಪ್ಪ ಇದೇ ವೇಳೆ ಮನವಿ ಮಾಡಿದರು.

‘ನನಗೆ ವಯಸ್ಸಾಗಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಆದರೆ, ನಾನು ಗಟ್ಟಿ-ಮುಟ್ಟಾಗಿದ್ದೇನೆ. ಇನ್ನೂ 10 ವರ್ಷ ರಾಜಕೀಯದಲ್ಲಿ ಇರಲಿದ್ದು, ಇನ್ನೂ ಎರಡು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ. ರಾಜ್ಯದ ಅಭಿವೃದ್ಧಿಯ ಬಗ್ಗೆ ತಲೆ ಕೆಡಿಸಿಕೊಂಡು ಕೆಲಸ ಮಾಡುತ್ತಿದ್ದೇನೆ

-ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News