"ಸಿದ್ದರಾಮಯ್ಯರ ಸೋಲು ನನ್ನ ಸಾವಿಗಿಂತ ಹೆಚ್ಚಿನ ನೋವು ತಂದಿದೆ"

Update: 2018-12-09 14:52 GMT

ಕೋಲಾರ, ಡಿ. 9: ಪ್ರಜಾಪ್ರಭುತ್ವದಲ್ಲಿ ಅಧಿಕಾರ ಮುಖ್ಯವಲ್ಲ, ಸಾಮಾಜಿಕ ಪರಿಕಲ್ಪನೆಯ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಜವಾಬ್ದಾರಿ ಇರಬೇಕು, ಎಲ್ಲರಿಗೂ ಮತ ಹಾಕುವ ಸ್ವಾತಂತ್ರ್ಯ ಬಂದರೆ ಸಾಲದು. ಪ್ರತಿ ಪ್ರಜೆಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿದಾಗ ಪ್ರಜಾಪ್ರಭುತ್ವಕ್ಕೆ ಮತ್ತು ಸಮಾನತೆಗೆ ನಿಜಅರ್ಥ ಬರುತ್ತದೆ ಎಂದು ಹಿಂದುಳಿದ ವರ್ಗಗಳ ಧೀಮಂತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಎಸ್.ಎನ್.ಆರ್ ಆಸ್ಪತ್ರೆ ಮುಂಭಾಗದ ಬೃಹತ್ ವೇದಿಕೆಯಲ್ಲಿ ಜಿಲ್ಲಾ ಕುರುಬ ಸಂಘದಿಂದ ಆಯೋಜಿಸಿದ್ದ ದಾಸಶ್ರೇಷ್ಠ ಕನಕದಾಸರ 531ನೇ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜದ ಅನೇಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ನನ್ನ ಅವಧಿಯಲ್ಲೇ ಸುಮಾರು 13 ಮಹನೀಯರ ಜಯಂತಿಗಳನ್ನು ಆಚರಿಸಲಾಯಿತು. ಇವರೆಲ್ಲಾ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಿದವರಾಗಿದ್ದು, ಇವರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಬಾರದು ಎಂಬ ಕಾರಣಕ್ಕೆ ಸರ್ಕಾರವೇ ನೇರವಾಗಿ ಈ ಮಹನೀಯರ ಜಯಂತಿಗಳನ್ನು ಆಚರಣೆ ಮಾಡುತ್ತದೆ. ಆದರೆ ಕೆಲವು ಧರ್ಮಾಂಧ ಜನರು ಎಲ್ಲವನ್ನೂ ಒಪ್ಪುತ್ತಾರೆ ಆದರೆ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಾರೆ. ಟಿಪ್ಪು ಸುಲ್ತಾನ್ ಹಿಂದೂ ವಿರೋಧಿಯೂ ಅಲ್ಲ, ಸಮಾಜ ವಿರೋಧಿಯೂ ಅಲ್ಲ, ಈ ಧರ್ಮಾಂಧರ ಕಣ್ಣಿಗೆ ಪೊರೆ ಬಂದಿದೆ, ನಮ್ಮ ಸಮಾಜ ವರ್ಣಾಶ್ರಮದ ಪದ್ದತಿಯಿಂದ ನರಳುತ್ತಾ ಇದೆ ಎಂದ ಅವರು, ಯಾರು ಧರ್ಮ ಮತ್ತು ಜಾತಿ ಹಿನ್ನಲೆಯಿಂದ ಗುರುತಿಸುತ್ತಾರೋ ಅವರೇ ಧರ್ಮಾಂಧರು ಹಾಗೂ ಕೋಮುವಾದಿಗಳು ಎಂದರು.

ಸಮಾಜದ ಪರ ಕೆಲಸ ಮಾಡುವವರ ಕೈ ಬಿಟ್ಟರೆ ಅವರ ಪರಿಸ್ಥಿತಿ ಏನಾಗಬೇಕು. ಜನರ ದುಡ್ಡಿನಿಂದಲೇ ಅನ್ಯಭಾಗ್ಯ ಯೋಜನೆ ಜಾರಿಗೆ ತಂದಿರುವೆ, ಕೇಂದ್ರ ಸರ್ಕಾರ ಜಾರಿಗೊಳಿಸಿದ್ದರೆ ಬೇರೆ ರಾಜ್ಯಗಳಲ್ಲಿ ಯಾಕೆ ಅನುಷ್ಠಾನ ಮಾಡಲಿಲ್ಲ. ಜನರ ದುಡ್ಡು ಜನರಿಗೇ ವೆಚ್ಚ ಮಾಡುವ ಮನಸ್ಸು ಇರಬೇಕು. ಶ್ರಮಿಕರು ಚೆನ್ನಾಗಿರೋದು ನಿಮಗೆ ಇಷ್ಟವಿಲ್ಲವೇ ಎಂದು ಕೇಂದ್ರ ಸರ್ಕಾರ ನಡೆಸುತ್ತಿರುವ ಬಿಜೆಪಿಗೆ ಪ್ರಶ್ನೆ ಹಾಕಿದರು.

ಕಾರ್ಯಕ್ರಮಕ್ಕೆ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದ ಜನರನ್ನು ನೋಡಿ ಅಸಮಾಧಾನ

ಈ ಹಿಂದೆ ಕೋಲಾರದಲ್ಲಿ ನಡೆದ ಅಹಿಂದ ಜಯಂತಿಗೆ ಬಂದಿದ್ದಾಗ ಎಷ್ಟು ಮಾತ್ರ ಜನ ಬಂದಿದ್ದರು. ಎಲ್ಲಾ ಒಗ್ಗೂಡಿ ಮಾಡಿ ಅಂತ ಹೇಳಿದ್ದೆ, ಆದರೆ  ಏನ್ ಜನ ಸೇರಿಸಿದ್ದೀರಾ? ಸಮುದಾಯದ ಮೇಲೆ ಇದೇನಾ ನಿಮಗಿರುವ ಗೌರವ ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸರ್ಕಾರ ಆಚರಣೆ ಮಾಡಿದ ದಿನ ಸಮಾಜದ ಕಾರ್ಯಕ್ರಮ ಮಾಡಬೇಡಿ ಎಂದು ಸಂಘಟಕರಿಗೆ ಕಿವಿಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ದಾಸಶ್ರೇಷ್ಠ ಕನಕದಾಸರು ಸಮಾನತೆಯನ್ನು ಸಾರಿದ ಮಹಾಪುರುಷ, ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ, ನಾವೆಲ್ಲರೂ ಮನುಷ್ಯರಾಗಬೇಕಿದೆ, ಸಮಾಜದಲ್ಲಿ ಶೂದ್ರ ವರ್ಗದವರನ್ನು ದೇವಾಲಯದಿಂದ ದೂರ ಇರಿಸಲಾಗಿತ್ತು, ಇಂದು ಮತ್ತೆ ಮಹಿಳೆಯರು ದೇವಾಲಯ ಪ್ರವೇಶ ನಿರಾಕರಿಸಲಾಗುತ್ತಿದೆ, ಈ ಬಗ್ಗೆ ಜನ ಮಾತನಾಡದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಎಲ್ಲಾ ಶೂದ್ರ ವರ್ಗಗಳಿಗೂ ದೇವಾಲಯ ಪ್ರವೇಶ ನಿರಾಕರಿಸಬಹುದು ಎಂಬ ಆತಂಕ ವ್ಯಕ್ತಪಡಿಸಿದರು.

ವಿಧಾನಸಭಾ ಸ್ಪೀಕರ್ ರಮೇಶ್‍ ಕುಮಾರ್ ಮಾತನಾಡಿ, ರಾಜಕಾರಣ ನಿಂತ ನೀರಲ್ಲ ಹರಿಯೋ ನದಿ ಇದ್ದಂತೆ,  ಆದರೂ ಸಿದ್ದರಾಮಯ್ಯನವರಿಗೆ ಸರ್ಕಾರ ರಚನೆಗೆ ಅವಕಾಶ ತಪ್ಪಿತು. ನಮ್ಮ ಜನ ಬಹಳ ಬೇಗ ಸೇವೆ ಮಾಡಿದವರನ್ನು ಮರೆಯುತ್ತಾರೆ. ಅವರ ಸೋಲು ತನ್ನ ಸಾವಿಗಿಂತ ಹೆಚ್ಚಿನ ನೋವು ತಂದಿದೆ ಎಂದು ವೇದಿಕೆಯಲ್ಲಿ ಕಣ್ಣೀರು ಹಾಕಿದರು. ಸತ್ಯ ಕಹಿಯಾಗಿರುತ್ತೆ ಸತ್ಯ ಕಠಿಣವಾಗಿರುತ್ತೆ  ಆದರೆ ಸತ್ಯಕ್ಕೆ ಸಾವಿರಲ್ಲ, ಎಂದ ಅವರು, ಕೆ. ಸಿ. ವ್ಯಾಲಿ ಹಾಗೂ ಎತ್ತಿನಹೊಳೆ ಯೋಜನೆ ರೂಪಿಸಿ ರೈತರಿಗೆ ಜೀವ ತುಂಬಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋಲಾರದ ಜನತೆ ಜೀವಮಾನದವರೆಗೂ ಮರೆಯಲಾರರು ಎಂದು ಕೃತಜ್ಞತೆ ಸಲ್ಲಿದರು.

ಇದೇ ವೇಳೆ ಸಿದ್ದರಾಮಯ್ಯನವರಿಗೆ ಅವರ ಅಭಿಮಾನಿಗಳಿಂದ ಕುರಿಪಟ್ಲಿಯನ್ನು ಕೊಡುಗೆಯಾಗಿ ನೀಡಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ತಬ್ದ ಚಿತ್ರಗಳು ಹಾಗೂ ಹಲವು ಸಾಂಸ್ಕೃತಿಕ ಜಾನಪದ ಕಲಾ ತಂಡಗಳಿಂದ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಕೆ.ಹೆಚ್.ಮುನಿಯಪ್ಪ, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ಶಾಸಕರಾದ ಕೆ.ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಚಿಕ್ಕಹನುಮಪ್ಪ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ದಲಿತ ಮುಖಂಡ ಸಿ.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ, ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್, ಎನ್.ರಾಜಣ್ಣ, ಅಂಚೆ ಅಶ್ವಥ್, ತ್ಯಾಗರಾಜ್ ಮುದ್ಧಪ್ಪ ವೇದಿಕೆಯಲ್ಲಿದ್ದರು.

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಆಡಳಿತದ ವಿರುದ್ಧ ಫಲಿತಾಂಶ ಬರುತ್ತದೆ. ಕೇಂದ್ರದಲ್ಲಿ ಬಿಜೆಪಿ ಬಲ ಕುಗ್ಗುತ್ತಿದೆ, ವ್ಯಕ್ತಿತ್ವದ ಆಧಾರದ ಮೇಲೆ ವ್ಯಕ್ತಿಯನ್ನು ಗುರುತಿಸಬೇಕೇ ವಿನಃ ಜಾತಿ, ಧರ್ಮದ ಮೇಲಲ್ಲ. ಜಾತಿ, ಧರ್ಮವನ್ನು ಗುರುತಿಸಿ ಮಾತನಾಡುವವರೇ ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು. ಮತಾಂಧರು, ಕೋಮುವಾದಿಗಳು. ಅಭಿವೃದ್ಧಿಯ ಕಾಳಜಿ ಇದ್ದರೆ ಸಮಾಜ ಸುಧಾರಣೆ ಮಾಡಿದ ಮಹನೀಯರ ಜಯಂತಿಗಳಿಗೆ ಅಡ್ಡಿಪಡಿಸಲ್ಲ. ಜನಪರ ಕಾಳಜಿ ಇದ್ದರೆ ಜಾತಿ, ಧರ್ಮರಹಿತ ಸಮಾಜ ನಿರ್ಮಾಣ ಮಾಡಬೇಕು. ಸಂವಿಧಾನ ವಿರೋಧಿಗಳು ದೇಶದ ಆಳ್ವಿಕೆ ನಡೆಸಲು ಅನರ್ಹರು

ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ,

ಬರಡು ಭೂಮಿಗೆ ನೀರು ಕೊಟ್ಟ ಭಗೀರಥ ಸಿದ್ದರಾಮಯ್ಯ. ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿದ್ದರೆ ಅವರ ಸೋಲು ಆಗುತ್ತಿರಲಿಲ್ಲ, ನಾನು ಮತ್ತು ನಸೀರ್ ಅಹ್ಮದ್  ಪರಿಪರಿಯಾಗಿ ಬೇಡಿದರೂ ಕೋಲಾರ ಕ್ಷೇತ್ರಕ್ಕೆ ಬರಲಿಲ್ಲ. ಅವರ ಸೋಲು ನನ್ನ ಸಾವಿಗಿಂತ ಹೆಚ್ಚಿನ ನೋವು ತಂದಿದೆ . ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಕಂಡದನ್ನು ನೆನೆದು ಸಮುದಾಯ ಇಂತಹ ವ್ಯಕ್ತಿಗಳನ್ನು ಕೈಬಿಡಬಾರದು. ನಮ್ಮ ಜನ ಬಹಳ ಬೇಗ ಸೇವೆಯನ್ನು ಮರೆತು ಬಿಡುತ್ತಾರೆ. ಅವರು ಕೋಲಾರದಲ್ಲಿ ಚುನಾವಣೆಗೆ ನಿಂತಿದ್ದರೆ ಇತಿಹಾಸ ಸೃಷ್ಟಿಯಾಗುತ್ತಿತ್ತು ಆದರೆ ಅವ್ರು ಕ್ಷೇತ್ರ ಬಿಟ್ಟು ಬರಲಿಲ್ಲ. ಮುಂದಿನ ದಿನಗಳಲ್ಲಿ ಅವರ ಕೈ ಬಲಪಡಿಸೋಣವೆಂದು ಸಂಕಲ್ಪ ಮಾಡಬೇಕಿದೆ.

ಕೆ.ಆರ್.ರಮೇಶ್ ಕುಮಾರ್, ವಿಧಾನಸಭಾಧಕ್ಷ, ಕರ್ನಾಟಕ ಸರ್ಕಾರ.

ಕಾಂಗ್ರೆಸ್ ಪಕ್ಷದ ಶಾಸಕರ ಪೋನ್ ಕದ್ದಾಲಿಕೆ ಬಿಜೆಪಿ ಸೃಷ್ಟಿ.ಇದು ಅವರ ಸಂಸ್ಕೃತಿ. ರಾಜ್ಯ ಸರ್ಕಾರ ಪೋನ್ ಕದ್ದಾಲಿಕೆಗೆ ಕೈ ಹಾಕಿಲ್ಲ. ಯಾವ ಶಾಸಕರು ಸಿದ್ದರಾಮಯ್ಯ ಅವರಿಗೆ ದೂರು ಕೊಟ್ಟಿಲ್ಲ. ಇದು ಬಿಜೆಪಿಯ ಅಭ್ಯಾಸ ಬಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಇಂತಹ ಕೆಲಸ ಮಾಡುತ್ತಿತ್ತು. ಆ ಅನುಭವದ ಮೇಲೆ ಸುಳ್ಳು ಆರೋಪ ಮಾಡುತ್ತಿದೆ. ಬಿಜೆಪಿಯವರು ಭರದಲ್ಲಿ ನಾಟಕವಾಡುತ್ತಿದ್ದಾರೆ.  ರೈತರ ಪರ ಕಾಳಜಿಯಿಲ್ಲ ಬಿಜೆಪಿಯವರು ಬರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರಕ್ಕೆ ಹೋಗಿ ರೈತರ ಪರವಾಗಿ ಮಾತನಾಡುವ ಧೈರ್ಯ ಬಿಜೆಪಿ ಮುಖಂಡರಿಗೆ ಇಲ್ಲ.

ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ ಹೇಳಿಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News