ಪರಿಸರ ಸಂರಕ್ಷಿಸದಿದ್ದಲ್ಲಿ ಮುಂದಿನ ಪೀಳಿಗೆ ಭೀಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ: ಸಚಿವ ಜಿ.ಟಿ.ದೇವೇಗೌಡ

Update: 2018-12-09 15:57 GMT

ಮೈಸೂರು,ಡಿ.9: ದಿನದಿಂದ ದಿನಕ್ಕೆ ಹಾಳಾಗುತ್ತಿರುವ ಪರಿಸರವನ್ನು ಸಂರಕ್ಷಿಸದಿದ್ದಲ್ಲಿ ಮುಂದಿನ ಪೀಳಿಗೆ ಭೀಕರ ಪರಿಣಾಮ ಎದುರಿಸುವ ಪರಿಸ್ಥಿತಿ ಉಂಟಾಗಲಿದೆ ಎಂದು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ಲಿಂಗಾಂಬುಧಿ ನಗರ ಉದ್ಯಾನವನದ ಮುಂಭಾಗ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಲಿಂಗಾಂಬುಧಿ ನಗರ ಉದ್ಯಾನ ಮತ್ತು ಸಾಲುಮರದ ತಿಮ್ಮಕ್ಕ ವೃಕ್ಷೋಧ್ಯಾನಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪೂರ್ವಿಕರು ಹಾಳು ಬಿದ್ದ ಜಮೀನಿನಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಡುವುದರ ಮೂಲಕ ಮುಂದಿನ ಜನತೆಗೆ ಉಸಿರಾಡಲು ಶುದ್ಧ ಗಾಳಿ ಸಿಗುಂತೆ ಮಾಡಿದ್ದರು. ಆದರೆ ಅವುಗಳನ್ನು ನಮ್ಮ ಸ್ವಾರ್ಥಕ್ಕಾಗಿ ನಾಶ ಮಾಡಿ ಸದ್ಯದ ಪರಿಸ್ಥಿತಿ ಬಿಗಡಾಯಿಸುವಂತಾಗಿದೆ. ಇದೇ ರೀತಿ ಮರಗಳು ನಾಶವಾದಲ್ಲಿ ಮುಂದಿನ ಜನತೆ ಭೀಕರ ಪರಿಣಾಮಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ಇರುವ ವನ್ಯ ಸಂಪತ್ತನ್ನು ಉಳಿಸಿಕೊಳ್ಳುವತ್ತ ಇಂದಿನಿಂದಲೇ ನಾವೆಲ್ಲರೂ ಕಂಕಣಬದ್ದರಾಗಬೇಕೆಂದು ಹೇಳಿದರು.

ಪರಿಸರ ನಾಶವಾಗುವುದನ್ನು ಕಣ್ಣಾರೆ ಕಂಡ ತಿಮ್ಮಕ್ಕನವರು ರಸ್ತೆಬದಿಗಳಲ್ಲಿ ಸಸಿಗಳನ್ನು ನೆಟ್ಟು, ಅವುಗಳನ್ನು ಪೋಷಿಸುವುದರ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದು ಸಾಲುಮರದ ತಿಮ್ಮಕ್ಕ ಎಂಬ ಖ್ಯಾತಿಗಳಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆ ತರುವ ಸಂಗತಿಯಾಗಿದೆ. ನಾವು ಸಹಾ ಸಾಲು ಮರದ ತಿಮ್ಮಕ್ಕನವರಂತೆ ಲಭ್ಯವಿರುವ ಸ್ಥಳದಲ್ಲಿ ಸಸಿಗಳನ್ನು ನೆಟ್ಟು, ಪೋಷಿಸುವತ್ತ ಯುವ ಜನತೆ ಮುಂದಾಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಮೇಯರ್ ಪುಷ್ಪಲತಾ ಜಗನ್ನಾಥ್, ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News