6.26 ಕೋಟಿ ರೂ ಗಳಲ್ಲಿ ಕುಕ್ಕರಹಳ್ಳಿ ಕಾರಂಜಿ ಕೆರೆಗಳ ಅಭಿವೃದ್ಧಿ: ಸಚಿವ ಸಾ.ರಾ.ಮಹೇಶ್

Update: 2018-12-09 16:06 GMT

ಮೈಸೂರು,ಡಿ.9: ಮೈಸೂರಿಗೆ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರನ್ನು ಮತ್ತಷ್ಟು  ಆಕರ್ಷಿಸುವ ಸಲುವಾಗಿ ನಗರದಲ್ಲಿರುವ ಕುಕ್ಕರಹಳ್ಳಿ, ಕಾರಂಜಿ, ಲಿಂಗಾಂಬುಧಿ ಕರೆಗಗಳನ್ನು ಅಭಿವೃದ್ಧಿಗೊಳಿಸಲು 6.26 ಕೋಟಿ ರೂ. ಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ನಗರದ ಕಾರಂಜಿ ಕರೆಗೆ ರವಿವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಮೈಸೂರಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ದಿಸೆಯಲ್ಲಿ ಪ್ರವಾಸೋದ್ಯಮ ಇಲಾಖೆ ಹೆಚ್ಚಿನ ಒತ್ತು ನೀಡಿದ್ದು, ಮೈಸೂರಿನಲ್ಲಿರುವ ಕುಕ್ಕರಹಳ್ಳಿ ಹಾಗೂ ಕಾರಂಜಿ ಕೆರೆಗಳ ಅಭಿವೃದ್ಧಿಗಾಗಿ ಕ್ರಮವಾಗಿ 4 ಕೋಟಿ 20 ಲಕ್ಷ ಹಾಗೂ 2 ಕೋಟಿ 6 ಲಕ್ಷ ರೂ. ಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಪರಿಸರ ತಜ್ಞರು, ಮೈಸೂರು ವಿ.ವಿ.ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯ ವರದಿ ಬಂದ ಕೂಡಲೇ ಕೆರೆಗಳ ಅಭಿವೃದ್ಧಿಯನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಲಿಂಗಾಂಬುಧಿ ಕೆರೆಗೆ ಸಂಬಂಧಿಸಿದಂತೆ ಪರಿಸರ ತಜ್ಞರು ಹಾಗೂ ಪ್ರವಾಸೋದ್ಯಮ ಇಲಾಖೆಯ  ಅಧಿಕಾರಿಗಳಿಗೆ ಅಂದಾಜು ವೆಚ್ಚ ಎಷ್ಟು ತಗುಲಲಿದೆ ಎಂಬುದರ ಬಗ್ಗೆ ತಮಗೆ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. ಅವರಿಂದ ವರದಿ ಬಂದ ನಂತರ ಅನುಧಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವದೆಂದರು. ಇದೇ ಸಂದರ್ಭದಲ್ಲಿ ಅವರು ಚಾಮುಂಡಿಬೆಟ್ಟದ ಮೇಲೆ ಬೀಳುವ ಮಳೆಯ ನೀರು ವ್ಯರ್ಥವಾಗದಂತೆ ನೇರವಾಗಿ ಕಾರಂಜಿ ಕೆರೆ ಸೇರುವಂತೆ ಚಿಂತನೆ ನಡೆಸಲಾಗಿದೆ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದರು.

ನಿನ್ನೆ ನಾನು, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಕೃಷ್ಣರಾಜ ಸಾಗರ ಜಲಾಶಯಕ್ಕೆ ಭೇಟಿ ನೀಡಿ, ಅಲ್ಲಿ ಡಿಸ್ನಿ ಲ್ಯಾಂಡ್ ನಿರ್ಮಿಸುವ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ್ದೇವೆ. ಕೆಲವರು ಸರಿಯಾದ ಮಾಹಿತಿಯನ್ನರಿಯದೆ ಇಲ್ಲಿ ಡಿಸ್ನಿಲ್ಯಾಂಡ್ ನಿರ್ಮಿಸಿದರೆ ಕೆ.ಆರ್.ಎಸ್ ಜಲಾಶಯಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಅಪಪ್ರಚಾರ ಮಾಡುತಿದ್ದಾರೆ. ರೈತರ ಸ್ಥಿತಿಗತಿಗಳನ್ನು ಅರಿತು ನಾವು ಮುಂದಿನ ಹೆಜ್ಜೆ ಇಡುತ್ತೇವೆ. ಹಾಲಿ ಕೆ.ಆರ್.ಎಸ್. ಜಲಾಶಯದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ 400 ಎಕರೆ ಭೂಮಿ ಇದ್ದು, ಇದರಲ್ಲಿ 340 ಎಕರೆ ಭೂಮಿಯಲ್ಲಿ ಡಿಸ್ನಿಲ್ಯಾಂಡ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಮೈಸೂರಿನ ರೇಸ್ ಕ್ಲಬ್ ಬಳಿ ಇರುವ ಅನಧಿಕೃತ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ರೇಸ್ ಕ್ಲಬ್ ಅಧ್ಯಕ್ಷರೊಂದಿಗೆ ಚರ್ಚಿಸಲಾಗಿದೆ.  ಆರಂಭದ ಹಂತದಲ್ಲಿ ಕೆಲವು ಕಟ್ಟಡಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆದಿದೆ. ಈ ವಿಷಯದ ಬಗ್ಗೆ ಬೆಳಗಾವಿ ಅಧಿವೇಶನ ಮುಗಿದ ನಂತರ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಎಸ್.ಎ.ರಾಮದಾಸ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News