×
Ad

ರಾಜ್ಯ ಸಮಗ್ರ ಅಭಿವೃದ್ಧಿ ನಮ್ಮ ಆದ್ಯತೆ: ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ

Update: 2018-12-09 21:55 IST

ಕಲಬುರ್ಗಿ, ಡಿ. 9: ಬೆಳಗಾವಿ ಅಧಿವೇಶನ ಸಂದರ್ಭದಲ್ಲಷ್ಟೇ ಹೈ.ಕ., ಉ.ಕ ಮತ್ತು ಮುಂಬೈ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಎಲ್ಲ ಸಮಯದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿ ನಮ್ಮ ಆದ್ಯತೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲ ಭಾಗದ ಜನರ ಸ್ಥಳೀಯ ಜನರ ಸಮಸ್ಯೆ ಪರಿಹಾರ ಬಗ್ಗೆಯೂ ಚರ್ಚಿಸುತ್ತೇವೆ. ಸಮಸ್ಯೆಗಳಿಗೆ ಪರಿಹಾರ ತುರ್ತಾಗಿ ಆಗಬೇಕೆಂದು ಜನರ ನಿರೀಕ್ಷೆ ಇರುತ್ತದೆ. ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ಸಂಬಂಧ ವಿಚಾರಣೆ ಅಂತಿಮ ಹಂತದಲ್ಲಿದೆ ಎಂದರು.

ಬಿಜೆಪಿಯ ಹೊಸ ಸುಳ್ಳು: ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 37 ಸಾವಿರ ಕೋಟಿ ರೂ.ಲೆಕ್ಕ ಸಿಕ್ಕಿಲ್ಲ ಎಂಬ ಬಿಜೆಪಿ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಜ್ಯದ ಜನರನ್ನು ದಿಕ್ಕು ತಪ್ಪಿಸಲು ಬಿಜೆಪಿ ಹೊಸ ಸುಳ್ಳು ಹೇಳುತ್ತಿದೆ. ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ 2ಜಿ, 3ಜಿ, 4ಜಿ ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿ, ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ ಏನೂ ಕ್ರಮ ಕೈಗೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರು.

ರಾಜ್ಯ ಸರಕಾರಕ್ಕೆ ಬಿಜೆಪಿಯವರ ದೃಢೀಕರಣದ ಅಗತ್ಯವಿಲ್ಲ. ರೈತರ ಸಾಲಮನ್ನಾ ಮಾಡಿದ್ದು, ಬರ-ನೆರೆ ಪರಿಹಾರಕ್ಕೆ ಮೈತ್ರಿ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ. ಬರ ಪೀಡಿತ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ಒದಗಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಬಿಜೆಪಿಯವರಿಗೆ ಕನಿಷ್ಟ ನೈತಿಕತೆ ಇದ್ದರೆ ಮೊದಲು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕು. ಬರ ಪರಿಸ್ಥಿತಿಗೆ ನೆರವು ಕೊಡಿಸಬೇಕು. ರೈತರ ಸಾಲಮನ್ನಾಕ್ಕೆ ರಾಜ್ಯ ಸರಕಾರದೊಂದಿಗೆ ಕೈಜೋಡಿಸಬೇಕಿತ್ತು. ಅದನ್ನು ಮಾಡದೆ ಪ್ರತಿಭಟನೆ ಮುಂದಾಗಿರುವುದು ಹಾಸ್ಯಸ್ಪದ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News