ಆಕಸ್ಮಿಕ ಬೆಂಕಿ: 4 ಲಕ್ಷ ರೂ. ವೌಲ್ಯದ ಕಬ್ಬು ಭಸ್ಮ

Update: 2018-12-09 17:49 GMT

ಮಂಡ್ಯ, ಡಿ.9: ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 4 ಲಕ್ಷ ರೂ. ವೌಲ್ಯದ ಎರಡು ಎಕರೆ ಕಟಾವಾಗಬೇಕಿದ್ದ ಕಬ್ಬು ಭಸ್ಮವಾಗಿರುವ ಘಟನೆ ಪಾಂಡವಪುರ ರೈಲ್ವೆ ನಿಲ್ದಾಣದ ಬಳಿಯ ಜಮೀನೊಂದರಲ್ಲಿ ರವಿವಾರ ಬೆಳಗ್ಗೆ ನಡೆದಿದುದಾಗಿ ವರದಿಯಾಗಿದೆ.

ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದ ಕ್ಯಾಷಿಯರ್ ಮರೀಗೌಡ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ ಈ ದುರ್ಘಟನೆ ನಡೆದಿದ್ದು, ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಾಗ ಸುಮಾರು 20ಕ್ಕೂ ಹೆಚ್ಚು ಆಳುಗಳು ಕಬ್ಬು ಕಡಿಯುವಲ್ಲಿ ನಿರತರಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕಬ್ಬು ಕಡಿಯುತ್ತಿದ್ದ ವೇಳೆ ಹಿಂದಿನಿಂದ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಗದ್ದೆ ತುಂಬಾ ಆವರಿಸಿಕೊಂಡಿತು. ಈ ವೇಳೆ ಕೆಲಸದಾಳುಗಳು ಗದ್ದೆಯಿಂದ ಓಡಿ ಹೋಗಿ ಪ್ರಾಣ ಕಾಪಾಡಿಕೊಂಡರು ಎಂದು ಜಮೀನು ಮಾಲಕರ ಸಂಬಂಧಿ ಹರಿಕೃಷ್ಣ ತಿಳಿಸಿದರು.

ಕೂಡಲೇ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಲಾಗಿ ಅವರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ ಬಹುತೇಕ ಕಬ್ಬು ಭಸ್ಮವಾಗಿತ್ತು.

ಸುಮಾರು 140 ಟನ್ ಕಬ್ಬು ಬೆಳೆಲಾಗಿತ್ತು, ಇನ್ನೇನು ಕೆಲವೇ ನಿಮಿಷಗಳಲ್ಲಿ ಕಬ್ಬು ಕಟಾವಾಗಿ ಕೆ.ಆರ್.ಪೇಟೆಯ ಐಸಿಎಲ್ ಕಾರ್ಖಾನೆಗೆ ರವಾನೆಯಾಗುವಷ್ಟರಲ್ಲಿ ಬೆಂಕಿ ಬಿದ್ದು ನಷ್ಟವಾಗಿದೆ ಎಂದು ರೈತ ಮರೀಗೌಡ ಹೇಳಿದರು.

ಬೆಂಕಿ ನಂದಿಸುವಲ್ಲಿ ಸ್ಥಳೀಯ ಯುವಕರಾದ ಶ್ರೀಧರ, ಚಂನ್, ಗಗನ್ ಕೂಡಲೇ ಧಾವಿಸಿ ರೈತರಿಗೆ ನೆರವಾದರು.3

ತಹಶೀಲ್ದಾರ್ ಭೇಟಿ

ಕಬ್ಬಿನ ಗದ್ದೆಗೆ ಬೆಂಕಿ ಬಿದ್ದ ವಿಷಯ ತಿಳಿದ ಪಾಂಡವಪುರ ತಹಶೀಲ್ದಾರ್ ಎಂ.ವಿ.ರೂಪಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಹಾರಕ್ಕೆ ಆಗ್ರಹ

ಸಾವಿರಾರು ರೂಪಾಯಿ ಖರ್ಚು ಮಾಡಿ 517 ತಳಿಯ 12 ತಿಂಗಳ ತೆನೆ ಕಬ್ಬು ಬೆಂಕಿಗಾಹುತಿಯಾಗಿ ರೈತನಿಗೆ ಭಾರೀ ನಷ್ಟವಾಗಿದೆ. ಸರಕಾರ ಸಂತ್ರಸ್ತ ರೈತನಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News