29.95 ಕೋ.ರೂ. ವೆಚ್ಚದ ಕಾಮಗಾರಿಗೆ ಶಾಸಕ ಹಾಲಪ್ಪ ಶಂಕುಸ್ಥಾಪನೆ

Update: 2018-12-09 17:57 GMT

ಸಾಗರ, ಡಿ.9: ಸುಮಾರು 26 ಕೋಟಿ ರೂ. ವೆಚ್ಚದಲ್ಲಿ ನಗರ ವ್ಯಾಪ್ತಿಯ 189 ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿ ಪೈಪ್‌ಗಳಿಗೆ 12,700 ಮನೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಮುಂದಿನ 15 ತಿಂಗಳಿನೊಳಗೆ ಮುಗಿಸುವಂತೆ ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದ್ದಾರೆ.

ಇಲ್ಲಿನ ಅಣಲೆಕೊಪ್ಪದಲ್ಲಿ ರವಿವಾರ ಕರ್ನಾಟಕ ಜಲ ಮಂಡಳಿ ಮತ್ತು ನಗರಸಭೆ ವತಿಯಿಂದ ಪಟ್ಟಣದಲ್ಲಿ 29.95 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಗೃಹ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಶಂಕುಸ್ಥಾಪನೆ ನೆರೇರಿಸಿ ಅವರು ಮಾತನಾಡುತ್ತಿದ್ದರು.

ನಗರ ವ್ಯಾಪ್ತಿಯಲ್ಲಿ ಒಂದಷ್ಟು ಶಾಶ್ವತ ಕಾಮಗಾರಿ ಮಾಡಲು ಚಿಂತನೆ ನಡೆಸಲಾಗಿದೆ. ಪ್ರಮುಖವಾಗಿ ಗಣಪತಿ ಕೆರೆ ಅಭಿವೃದ್ದಿಗೆ 12 ಕೋಟಿ ರೂ. ಯೋಜನೆಯ ನೀಲನಕ್ಷೆ ತಯಾರಿಸಲಾಗಿದ್ದು, ಕೇಂದ್ರ ಸರಕಾರ 8 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ ನಾಲ್ಕು ಕೋಟಿ ರೂ. ರಾಜ್ಯ ಸರಕಾರ, ಜಿಪಂ ಅಥವಾ ನಗರಸಭೆಯಿಂದ ಬಿಡುಗಡೆ ಮಾಡಿಸಿ ಕೆಲಸ ಪ್ರಾರಂಭಿಸುವ ಚಿಂತನೆ ನಡೆಸಲಾಗಿದೆ. ಗಣಪತಿ ಕೆರೆ ಸುತ್ತಲೂ ವಾಕಿಂಗ್ ಪಾಥ್, ಕೆರೆ ಸ್ವಚ್ಛಗೊಳಿಸುವುದು, ಸುತ್ತಲೂ ವಿದ್ಯುದ್ದೀಪ ಅಳವಡಿಕೆ ಮಾಡಿ ಪ್ರವಾಸಿ ತಾಣವಾಗಿಸುವ ಯೋಜನೆ ಹೊಂದಲಾಗಿದೆ ಎಂದರು.

ಸೊರಬ ರಸ್ತೆ ಅಗಲೀಕರಣಕ್ಕೆ ನಾವು ಸಿದ್ಧರಿದ್ದೇವೆ. ಆದರೆ ಈ ರಸ್ತೆಯಲ್ಲಿರುವ ಕೆಲವು ಶ್ರೀಮಂತರು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಪರಿಹಾರ ಕೊಡುತ್ತೇವೆ ಎಂದು ಹೇಳಿದರೂ ಅದಕ್ಕೆ ಸ್ಪಂದಿಸದೆ ಆರು ಪಟ್ಟು ಪರಿಹಾರ ಕೇಳುತ್ತಿದ್ದಾರೆ. ಇದರಿಂದಾಗಿ 20 ಕೋಟಿ ರೂ. ಪರಿಹಾರ ಕೊಡುವ ಜಾಗದಲ್ಲೀಗ 61 ಕೋಟಿ ರೂ. ಪರಿಹಾರ ಕೊಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ವೀಣಾ ಪರಮೇಶ್ವರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಗ್ರೇಸಿ ಡಯಾಸ್, ಸದಸ್ಯರಾದ ಆರ್.ಶ್ರೀನಿವಾಸ್, ಸಂತೋಷ್ ಆರ್.ಶೇಟ್, ನಾಗರತ್ನ, ಅರವಿಂದ ರಾಯ್ಕರ್ ಉಪಸ್ಥಿತರಿದ್ದರು. ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಚನಾ ಪ್ರಾರ್ಥಿಸಿದರು. ಪ್ರಭಾಕರ್ ಸ್ವಾಗತಿಸಿದರು. ರಮೇಶ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News