ಸಿಎಂ ಕುಮಾರಸ್ವಾಮಿ ದೇವಸ್ಥಾನಗಳಿಗೆ ಸುತ್ತಿ, ಉತ್ತಮ ಆಡಳಿತ ನೀಡಲಿ: ಶಾಸಕ ಸಿ.ಟಿ.ರವಿ

Update: 2018-12-09 17:58 GMT

ದಾವಣಗೆರೆ, ಡಿ. 9: 35 ಸಾವಿರ ಕೋಟಿ ರೂ. ಬಗ್ಗೆ ಲೆಕ್ಕ ಕೇಳಿದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು 35 ರೂಪಾಯಿಯ ರೀತಿಯಲ್ಲಿ ಹಗುರವಾಗಿ ಮಾತನಾಡುತ್ತಾರೆ. ಈ ಕುರಿತು ಬೆಳಗಾವಿಯ ಅಧಿವೇಶನದಲ್ಲಿ ಬಿಜೆಪಿಯಿಂದ ಪ್ರಬಲ ಒತ್ತಾಯ ಕೇಳಿ ಬರಲಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ನಗರದ ಟೆನಿಸ್ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಲೆಕ್ಕಕ್ಕೆ ಸಿಗದ 35 ಸಾವಿರ ಕೋಟಿ ರೂ. ಬಗ್ಗೆ ಅವರಲ್ಲಿ ಕೇಳಿದರೆ ಉಡಾಫೆಯಾಗಿ ಉತ್ತರ ನೀಡುತ್ತಾರೆ ಎಂದ ಅವರು, ಸಮ್ಮಿಶ್ರ ಸರಕಾರ ಅದರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೂ ಬೇಡವೆನ್ನಿಸಿರಬೇಕು. ಹಾಗಾಗಿಯೇ ಅವರು ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಾಲಮನ್ನಾ ಬಗ್ಗೆ ಮಾಧ್ಯಮಗಳು ನೆನಪು ಮಾಡಿದರೆ ಮಾಧ್ಯಮಗಳ ಮೇಲೆ ಸಿಟ್ಟು, ನಾವು ನೆನಪು ಮಾಡಿಸಿದರೆ ನಮ್ಮ ಮೇಲೆ ಸಿಟ್ಟು, ಕೇಂದ್ರದಿಂದ ಅನುದಾನ ಬಂದಿದೆಯೆಂದು ನೆನಪು ಮಾಡಿಕೊಡುವ ಸಂಸದರ ಮೇಲೆಯೇ ಸಿಟ್ಟು ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ದೇವಸ್ಥಾನಗಳಿಗೆ ಸುತ್ತಿ, ಭಕ್ತಿ ಜೊತೆಗೆ ಉತ್ತಮ ಆಡಳಿತವನ್ನೂ ನೀಡಲಿ. ಆಡಳಿತ ವೈಫಲ್ಯವಿಲ್ಲದಂತೆ, ಅತಿವೃಷ್ಟಿ, ಅನಾವೃಷ್ಟಿ ಪರಿಹಾರ ಕಾಮಗಾರಿ ಕೈಗೊಳ್ಳಲಿ. ಈ ಮೂಲಕ ಭಕ್ತಿಯ ಸಹಕಾರ ಆಡಳಿತದಲ್ಲೂ ಆಗಲಿ ಎಂದರು.

ಈ ವೇಳೆ ಮಾಜಿ ಬಿಜೆಪಿ ರಾಜ್ಯ ಸ್ಲಂ ಮೋರ್ಚಾ ಅಧ್ಯಕ್ಷ ಜಯಪ್ರಕಾಶ ಅಂಬರಕರ್, ನಿವೃತ್ತ ಪೊಲೀಸ್ ಅಧೀಕ್ಷಕ ಕೆ.ಪಿ.ಚಂದ್ರಪ್ಪಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News