ಮೋದಿ ಆಡಳಿತದಲ್ಲಿ ಅಸಹಿಷ್ಣುತೆಯ ದಾಳಿ ಹೆಚ್ಚಳ: ಚ.ಹ. ರಘುನಾಥ್ ವಿಷಾದ

Update: 2018-12-09 18:48 GMT

ತುಮಕೂರು, ಡಿ.9: ಹಿಂದಿನಿಂದಲೂ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ದಾಳಿ ನಡೆಯುತ್ತಲೇ ಇದೆ. ಆದರೆ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಅಸಹನೆ, ಅಸಹಿಷ್ಣುತೆಯ ದಾಳಿ ಹೆಚ್ಚಾಗಿದ್ದು ಸರಕಾರದ ಲೋಪಗಳನ್ನು ಬಿತ್ತರಿಸುವ ಮಾಧ್ಯಮವನ್ನು ನಿರ್ಬಂಧಿಸುವ ಕೆಲಸವೂ ನಡೆದಿದೆ ಎಂದು ಹಿರಿಯ ಪತ್ರಕರ್ತ ಚ.ಹ.ರಘುನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ.

ತುಮಕೂರು ನಗರದ ಮಾಕಂ ಕಲ್ಯಾಣ ಮಂದಿರದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕದ ವತಿಯಿಂದ ಏರ್ಪಡಿಸಿದ್ದ ಎರಡು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ‘ಸಮೂಹ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ’ ವಿಷಯದ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಯು.ಆರ್.ಅನಂತಮೂರ್ತಿ ಅವರ ‘ಮಾತು ಸೋತ ಭಾರತ’ ಇಂದು ‘ಮಾತು ಹೂತ ಭಾರತ’ದಂತೆ ಕಾಣುತ್ತಿದೆ. ಅಭಿವ್ಯಕ್ತಿಯನ್ನು ನಿರ್ಬಂಧಿಸುವ, ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧ ಮಾತನಾಡುವವರನ್ನು ಕೊಲ್ಲುವ, ಇಲ್ಲವೆ ಹಲ್ಲೆ ಮಾಡಿ ಬೆದರಿಸುವ ಕೃತ್ಯಗಳು ದೇಶಾದ್ಯಂತ ನಡೆಯುತ್ತಿವೆ. ಇದು ಕೇವಲ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರವಲ್ಲ. ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲೂ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದರು.

ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿಲಂಕೇಶ್ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರಲಿಲ್ಲ. ಸತ್ಯವನ್ನು ಹೇಳುವುದು ಅವರ ಉದ್ದೇಶವಾಗಿತ್ತು. ನಾವು ನಂಬಿದ ತತ್ವಗಳನ್ನು ಹೇಳುವುದು, ಬರೆಯುವುದು ಅವರ ಮುಖ್ಯ ಕೆಲಸವಾಗಿತ್ತು. ಸಮಾಜ ವಿರೋಧಿ ಕೃತ್ಯಗಳಲ್ಲೂ ತೊಡಗಿರಲಿಲ್ಲ. ಸಮಾಜದ ಬಗ್ಗೆ ಕಳಕಳಿ ಇಟ್ಟುಕೊಂಡು ಬರೆದರು ಮತ್ತು ಬದುಕಿದರು. ಅವರನ್ನು ಕೊಲ್ಲಲಾಯಿತು. ಸತ್ಯವನ್ನು ಹೇಳುವವರನ್ನು ಬೆದರಿಕೆ ಕೊಲೆಯ ಮೂಲಕ ಅವರ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ. ಇದು ಇಂದು ಮತ್ತಷ್ಟು ಹೆಚ್ಚಾಗಿದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲು ದೊಡ್ಡ ಕಾರಣಗಳೇ ಬೇಕಾಗಿಲ್ಲ. ಒಂದು ನಾಟಕ, ಸಿನೆಮಾ ಮತ್ತು ಬರೆಹಗಳು ಸಾಕು ಎಂದು ತಿಳಿಸಿದರು.

ಇದೆಲ್ಲವೂ ಒಂದುಕಡೆಯಾದರೆ ಮತ್ತೊಂದು ಕಡೆ ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಕೊಲೆಯಾದಾಗ ಸಾವನ್ನು ಸಂಭ್ರಮಿಸುವ ದೊಡ್ಡ ಸಮೂಹವೇ ಇತ್ತು. ಪತ್ರಿಕೆಗಳು ಇಲ್ಲದೆ ಹೋದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದು ಹೇಳುವ ನ್ಯಾಯಾಲಯಗಳೇ ಅಭಿವ್ಯಕ್ತಿಯನ್ನು ದಮನ ಮಾಡುವ ಕೆಲಸವನ್ನೂ ಮಾಡುತ್ತಿವೆ ಎಂದು ಆತಂಕ ವ್ಯಕ್ತ ಪಡಿಸಿದರು.ಸಮೂಹ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ ಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ಮಲ್ಲಿಗೆ ಮತ್ತು ಲೇಖಕಿ ಎ.ಜ್ಯೋತಿ ಮಾತನಾಡಿದರು.

ವಿಚಾರವಾದಿಗಳ ಮೇಲೆ ಸಾಂಸ್ಕೃತಿಕ ಭಯೋತ್ಪಾದನೆ

ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಹೆಚ್ಚುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಚಕಾರವೆತ್ತಲಿಲ್ಲ. ದಾಳಿಗಳ ಕುರಿತು ವೌನ ವಹಿಸಿದ್ದಾರೆ. ಈ ಮೂಲಕ ಅವರು ಅಭಿವ್ಯಕ್ತಿಯ ಮೇಲಿನ ದಾಳಿಗೆ ಪರೋಕ್ಷ ಬೆಂಬಲ ನೀಡಿದರೆಂಬುದು ಈಗ ಇತಿಹಾಸ. ಲೇಖಕರು, ಪತ್ರಕರ್ತರು, ವಿಚಾರವಾದಿಗಳ ಮೇಲೆ ಸಾಂಸ್ಕೃತಿಕ ಭಯೋತ್ಪಾದನೆಯಾಗಿದೆ.ಕಲಾಕೃತಿಗಳು, ನಾಟಕ ಮತ್ತು ಬರೆಹಗಳನ್ನು ಸಂಬಂಧಿಸಿದ ಸಂಸ್ಥೆಗಳು ನಿರ್ಧರಿಸಬೇಕು. ಆದರೆ ಈಗ ಧಾರ್ಮಿಕ ಸಂಸ್ಥೆಗಳು ಇದನ್ನು ನಿರ್ಧರಿಸುವ ಕೆಲಸ ಮಾಡುತ್ತಿವೆ. ಇದು ಆತಂಕದ ಸಂಗತಿ ಎಂದು ಚ.ಹ.ರಘುನಾಥ್ ಹೇಳಿದರು.

ತಮಿಳುನಾಡಿನಲ್ಲಿ ಕಾದಂಬರಿಯನ್ನು ಬರೆದ ಲೇಖಕನ ಮನೆಯ ಮೇಲೆ ದಾಳಿ ನಡೆದವು. ಪ್ರತಿಭಟನೆಗಳಾದವು. ಹೀಗಾಗಿ ಆ ಕಾದಂಬರಿಕಾರ ತಮ್ಮ ಬರಹವನ್ನು ವಾಪಸ್ ಪಡೆಯುವಂತಹ ಸನ್ನಿವೇಶ ನಿರ್ಮಾಣವಾಯಿತು. ಕರ್ನಾಟಕದಲ್ಲಿ ದುಂಡಿ ಕೃತಿಯನ್ನು ಬರೆದ ಕೃತಿಕಾರನನ್ನು ಬಂಧಿಸಲಾಯಿತು. ಪದ್ಮಾವತಿ ಸಿನೆಮಾ ಬಿಡುಗಡೆಯಾಗದಂತೆ ಬಿಜೆಪಿ ಮತ್ತು ಅದರ ಸಹಸಂಘಟನೆಗಳು ತಡೆದವು. ಸುಪ್ರೀಂ ಕೋರ್ಟ್ ಚಿತ್ರ ಬಿಡುಗಡೆಗೆ ಅನುಮತಿ ನೀಡಿದರೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ನಡೆಯಿತು. ನಟಿ ದೀಪಿಕಾ ಪಡುಕೋಣೆ ಮತ್ತು ಪದ್ಮಾವತಿ ಚಿತ್ರದ ನಿರ್ದೇಶಕರಿಗೆ ಜೀವಭಯ ಉಂಟುಮಾಡಲಾಯಿತು. ಇದೆಲ್ಲವೂ ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ಪ್ರಹಾರ ಆಗಿದೆ.

 ಚ.ಹ.ರಘುನಾಥ್,ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News