ಆರ್ ಬಿಐ ಗವರ್ನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್ ರಾಜೀನಾಮೆ

Update: 2018-12-10 15:52 GMT

ಹೊಸದಿಲ್ಲಿ, ಡಿ.10: ಕೇಂದ್ರ ಸರಕಾರದ ಜೊತೆ ಹಲವು ತಿಂಗಳುಗಳ ತಿಕ್ಕಾಟದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಸೋಮವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ತಾನು ತಕ್ಷಣದಿಂದಲೇ ಪದತ್ಯಾಗ ಮಾಡುತ್ತಿರುವುದಾಗಿ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ಅಕ್ಟೋಬರ್‌ನಿಂದೀಚೆಗೆ ಆರ್‌ಬಿಐ ಹಾಗೂ ಕೇಂದ್ರ ಸರಕಾರದ ನಡುವೆ ಬಿಕ್ಕಟ್ಟು ತಲೆದೋರಿದ ಬಳಿಕ ಊರ್ಜಿತ್ ಪಟೇಲ್, ರಾಜೀನಾಮೆ ನೀಡಲಿದ್ದಾರೆಂಬ ವದಂತಿಗಳು ಬಹಳ ಸಮಯದಿಂದ ಹೊಗೆಯಾಡುತ್ತಿದ್ದವು. ಆರ್‌ಬಿಐನಲ್ಲಿ ಹೆಚ್ಚುವರಿ ಮೀಸಲು ನಿಧಿಗಳನ್ನು ತನಗೆ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೇಂದ್ರ ಸರಕಾರವು ಆರ್‌ಬಿಐ ಮೇಲೆ ಒತ್ತಡ ಹೇರುತ್ತಿರುವುದನ್ನು ಊರ್ಜಿತ್ ಪಟೇಲ್ ವಿರೋಧಿಸಿದ್ದರೆನ್ನಲಾಗಿದೆ.ಆರ್‌ಬಿಐನ ಸೆಕ್ಷನ್ 7 ಹಾಗೂ ಬ್ಯಾಂಕ್‌ಗಳ ನಿಷ್ಕ್ರಿಯ ಆಸ್ತಿ (ಎನ್‌ಪಿಎ)ಗೆ ಸಂಬಂಧಿಸಿ ಕೇಂದ್ರ ಸರಕಾರ ಹಾಗೂ ಆರ್‌ಬಿಐ ನಡುವೆ ತಿಕ್ಕಾಟ ತಾರಕಕ್ಕೇರಿತ್ತು.

ಆರ್‌ಬಿಐನಲ್ಲಿರುವ 3.6 ಲಕ್ಷ ಕೋಟಿ ರೂ. ಹೆಚ್ಚುವರಿ ಮೀಸಲು ನಿಧಿಯನ್ನು ತಾನು ಅಭಿವೃದ್ಧಿಗಾಗಿ ಬಳಸಿಕೊಳ್ಳಬಹುದಾಗಿದೆಯೆಂದು ಕೇಂದ್ರ ಸರಕಾರ ಹೇಳಿತ್ತು. ಆದರೆ ಸಂಭಾವ್ಯ ತುರ್ತುಪರಿಸ್ಥಿತಿಗಳನ್ನು ಗಮನ ದಲ್ಲಿಟ್ಟುಕೊಂಡು ಹೆಚ್ಚುವರಿ ಮೀಸಲು ನಿಧಿಗಳನ್ನು ತನ್ನಲ್ಲಿ ಇರಿಸಿಕೊಳ್ಳುವುದು ಅತ್ಯಗತ್ಯವೆಂದು ಆರ್‌ಬಿಐ ಪ್ರತಿಪಾದಿಸಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್‌ನ 24ನೇ ಗವರ್ನರ್ ಆಗಿ ಊರ್ಜಿತ್ ಪಟೇಲ್ 2016ರ ಸೆಪ್ಟೆಂಬರ್‌ನಲ್ಲಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದರು. ಮೋದಿ ಸರಕಾರದ ನಗದು ಅಮಾನ್ಯತೆ ನಿರ್ಧಾರದ ಬಗ್ಗೆ ಮೌನವಹಿಸಿದ್ದಕ್ಕಾಗಿ ಊರ್ಜಿತ್ ಪಟೇಲ್ ವ್ಯಾಪಕವಾಗಿ ಟೀಕೆಗೊಳಗಾಗಿದ್ದರು. ಊರ್ಜಿತ್ ಪಟೇಲ್ ಆರ್‌ಬಿಐ ಗವರ್ನರ್ ಆಗಿ ನೇಮಕಗೊಂಡ ಎರಡೇ ತಿಂಗಳುಗಳ ಬಳಿಕ ಮೋದಿ ಸರಕಾರ, ನಗದು ಅಮಾನ್ಯತೆಯನ್ನು ಘೋಷಿಸಿತ್ತು. ಈ ಮೊದಲು ಊರ್ಜಿತ್ ಪಟೇಲ್ ಆರ್‌ಬಿಐನ ಉಪ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಹಿಂದಿನ ಗವರ್ನರ್ ರಘುರಾಮ್ ರಾಜನ್ ಅವರ ಅಧಿಕಾರಾವಧಿ ಮುಕ್ತಾಯಗೊಂಡ ಬಳಿಕ ಊರ್ಜಿತ್ ಗವರ್ನರ್ ಆಗಿ ನೇಮಕಗೊಂಡರು.

ಊರ್ಜಿತ್ ಪಟೇಲ್ ಇಂದು ಸಲ್ಲಿಸಿರುವ ರಾಜೀನಾಮೆ ಪತ್ರದ ಪೂರ್ಣ ಪಾಠ ಇಲ್ಲಿದೆ.

‘‘ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ನಾನು ನನ್ನ ಹಾಲಿ ಹುದ್ದೆಗೆ ತಕ್ಷಣವೇ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಹಲವು ವರ್ಷಗಳ ಕಾಲ ಭಾರತೀಯ ರಿಸರ್ವ್ ಬ್ಯಾಂಕ್‌ನ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವುದು ನನಗೆ ದೊರೆತ ಸೌಭಾಗ್ಯ ಹಾಗೂ ಗೌರವವಾಗಿದೆ. ಆರ್‌ಬಿಐ ಸಿಬ್ಬಂದಿ, ಅಧಿಕಾರಿಗಳು ಹಾಗೂ ಆಡಳಿತ ವರ್ಗದ ಬೆಂಬಲ ಹಾಗೂ ಕಠಿಣ ಪರಿಶ್ರಮವು ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್‌ನ ಗಣನೀಯ ಸಾಧನೆಗಳಿಗೆ ಚಾಲನಾಶಕ್ತಿಯಾಗಿದೆ. ಆರ್‌ಬಿಐ ಕೇಂದ್ರ ಮಂಡಳಿಯ ನನ್ನ ಸಹದ್ಯೋಗಿಗಳು ಹಾಗೂ ನಿರ್ದೇಶಕರಿಗೆ ಕೃತಜ್ಞತೆಯನ್ನು ಸಲ್ಲಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ ಹಾಗೂ ಅವರೆಲ್ಲರಿಗೂ ಭವಿಷ್ಯದಲ್ಲಿ ಶುಭ ಕೋರುತ್ತಿದ್ದೇನೆ”.

ಆರ್‌ಬಿಐ ಮೇಲೆ ಕೇಂದ್ರದ ಸವಾರಿಗೆ ಬೇಸತ್ತಿದ್ದ ಪಟೇಲ್?

ಆರ್‌ಬಿಐ ಬಂಡವಾಳ ನಿಧಿ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಲಿಕ್ವಿಡಿಟಿ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಆರ್‌ಬಿಐಸ ಜೊತೆ ಸಮಾಲೋಚನೆ ನಡೆಸಲು ಅವಕಾಶ ನೀಡುವ ಆರ್‌ಬಿಐ ಕಾಯ್ದೆಯ ಸೆಕ್ಷನ್ 7ರ ವಿಶೇಷ ಅಧಿಕಾರವನ್ನು ಬಳಸಿಕೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿತ್ತು. ಆದರೆ ಊರ್ಜಿತ್ ಪಟೇಲ್ ಇದನ್ನು ತೀವ್ರವಾಗಿ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಊರ್ಜಿತ್ ಪಟೇಲ್ ರಾಜೀನಾಮೆ ನೀಡುವ ಸಾಧ್ಯತೆಯ ಬಗ್ಗೆ ಮಾಧ್ಯಮಗಳಲ್ಲಿ ವದಂತಿಗಳು ಕಳೆದ ಒಂದು ತಿಂಗಳಿನಿಂದ ಹರಿದಾಡಿದ್ದವು.

ಕಳೆದ ತಿಂಗಳು ಮುಂಬೈನಲ್ಲಿ ಆರ್‌ಬಿಐ ಆಡಳಿತ ಮಂಡಳಿ, 9 ತಾಸುಗಳ ಸುದೀರ್ಘ ಸಭೆಯನ್ನು ನಡೆಸಿದ ಬಳಿಕ ತನ್ನಲ್ಲಿರುವ ಹೆಚ್ಚುವರಿ ನಿಧಿಗಳನ್ನು ಕೇಂದ್ರದ ಜೊತೆ ಹಂಚಿಕೊಳ್ಳಲು ಹಾಗೂ ಸಣ್ಣ ಉದ್ಯಮಗಳಿಗೆ 25 ಕೋಟಿ ರೂ.ವರೆಗೆ ಪುನಾರಚನಾ ಸಾಲಗಳನ್ನು ಒದಗಿಸುವುದಕ್ಕಾಗಿ ಸಮಿತಿಯೊಂದನ್ನು ರಚಿಸಲು ಒಪ್ಪಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News