ಕೇಂದ್ರ ಸರಕಾರ ಲಿಂಗಾಯತರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ: ತೋಂಟದ ಸಿದ್ದರಾಮ ಮಹಾಸ್ವಾಮಿ

Update: 2018-12-10 14:37 GMT

ಗದಗ, ಡಿ.10: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ರಾಜ್ಯ ಸರಕಾರ ಕಳಿಸಿದ್ದ ಶಿಫಾರಸ್ಸನ್ನು ಕೇಂದ್ರ ಸರಕಾರವು ತಿರಸ್ಕರಿಸಿರುವುದು ವಿವೇಚನಾ ರಹಿತ ಕ್ರಮವಾಗಿದ್ದು, ಲಿಂಗಾಯತರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಂಗಾಯತರು ತಮ್ಮ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿ ಎಂದು ಕೇಳುತ್ತಿದ್ದಾರೆ ಹೊರತು ಯಾವುದೇ ಭಿಕ್ಷೆಯಲ್ಲ. ಅದು ಲಿಂಗಾಯತರ ಸಂವಿಧಾನ ಬದ್ಧವಾದ ಹಕ್ಕು. ಕೇಂದ್ರ ಸರಕಾರವು ಈ ಧರ್ಮಕ್ಕೆ ಮಾನ್ಯತೆಯನ್ನು ನೀಡುವ ಮೂಲಕ ಕೋಟ್ಯಂತರ ಲಿಂಗಾಯತರ ಭಾವನೆಗಳನ್ನು ಗೌರವಿಸಬೇಕಾಗಿತ್ತು.

ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಡೆದಿರುವ ಹೋರಾಟವು ಜೈನ, ಬೌದ್ಧ, ಸಿಖ್ ಧರ್ಮೀಯರಂತೆ ಲಿಂಗಾಯತರ ಅಸ್ಮಿತೆಯ ಹೋರಾಟವಾಗಿದೆ. ವಿಚಾರವಾದಿ ಬಸವಣ್ಣನವರನ್ನು ಕುರಿತು ಸಾಕಷ್ಟು ಅಧ್ಯಯನ ಮಾಡಿದ್ದೇನೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ತಿರಸ್ಕಾರ ಮಾಡಿರುವುದು ಆಶ್ಚರ್ಯ ಹಾಗೂ ಆಘಾತವನ್ನುಂಟು ಮಾಡಿದೆ.

ಲಿಂಗಾಯತ ಧರ್ಮವು ಸಾಮಾಜಿಕವಾಗಿ ಹಿಂದು ಧರ್ಮಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಈ ಧರ್ಮವನ್ನು ಸ್ವತಂತ್ರ ಧರ್ಮವೆಂದು ಮಾನ್ಯ ಮಾಡುವುದರಿಂದ, ಹಿಂದೂ ಧರ್ಮದ ವ್ಯಾಪ್ತಿಯಲ್ಲಿ ಬರುವ ಯಾವುದೇ ಸಮುದಾಯ ಸ್ವತಂತ್ರ ಧರ್ಮದ ಮಾನ್ಯತೆ ಕೇಳುವುದಿಲ್ಲ. ಆದರೂ, ಕೇಂದ್ರ ಸರಕಾರ ಈ ಪ್ರಸ್ತಾವನೆಯನ್ನು ತಿರಸ್ಕಾರ ಮಾಡಿರುವುದು ಸೂಕ್ತವಲ್ಲ. ಅಲ್ಲದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ ಎಂದು ಸ್ವಾಮೀಜಿಗಳು ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News