ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡದ ಕೇಂದ್ರದ ನಿಲುವು ಅತಾರ್ಕಿಕ: ಎಂ.ಬಿ.ಪಾಟೀಲ್

Update: 2018-12-10 14:41 GMT

ವಿಜಯಪುರ, ಡಿ.10: ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಒಪ್ಪಲು ಸಾಧ್ಯವಿಲ್ಲ ಎಂದಿರುವ ಕೇಂದ್ರ ಸರಕಾರದ ನಿಲುವು ಅತಾರ್ಕಿಕವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ, ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಕೇಂದ್ರ ಸರಕಾರ ತನ್ನ ಆದೇಶದಲ್ಲಿ ತಿಳಿಸಿರುವಂತೆ, 1871ರ ಜನಗಣತಿ ವೇಳೆ ಲಿಂಗಾಯತರು ಹಿಂದೂ ಧರ್ಮದ ಭಾಗವಾಗಿರಲಿಲ್ಲ ಎಂಬುದು ಸುಳ್ಳು. ಆಗ ಲಿಂಗಾಯತ, ಸ್ವತಂತ್ರ ಧರ್ಮದ ಮಾನ್ಯತೆ ಹೊಂದಿತ್ತು ಎಂಬುದು ಗಮನಾರ್ಹ ಎಂದು ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿದರೆ, ಆಗ ಲಿಂಗಾಯತ-ವೀರಶೈವರಲ್ಲಿ ಈಗಾಗಲೇ ಪರಿಶಿಷ್ಟ ಜಾತಿ ಸೌಲಭ್ಯ ಪಡೆಯುತ್ತಿರುವವರು ಅದರಿಂದ ವಂಚಿತರಾಗುತ್ತಾರೆ ಎಂಬುದು ಸುಳ್ಳು. ಮತ್ತು ಲಿಂಗಾಯತ ಧರ್ಮದ ಅನುಯಾಯಿಗಳು ಆತಂಕ ಪಡುವ ಅಗತ್ಯವಿಲ್ಲ. ಲಿಂಗಾಯತ ಧರ್ಮ ಅಂದು, ಇಂದು ಮತ್ತು ಎಂದೆಂದಿಗೂ ಸ್ವತಂತ್ರ ಧರ್ಮ. ಹೀಗಾಗಿ, ಲಿಂಗಾಯತರು ಸಂಯಮ ಮತ್ತು ಘನತೆಯಿಂದ ವರ್ತಿಸಬೇಕೆಂದು ಎಂದು ಮನವಿ ಮಾಡಿದ್ದಾರೆ. ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಕಾನೂನು ತಜ್ಞರು, ಮಠಾಧೀಶರು ಮತ್ತು ಸಮಾಜದ ಹಿರಿಯರ ಜೊತೆ ಚರ್ಚಿಸಿ, ಮುಂದಿನ ನಡೆ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News