ಬಿಜೆಪಿಗೆ ಸದನದಲ್ಲಿ ತಿರುಗೇಟು ನೀಡಲಿದ್ದೇವೆ: ಡಿ.ಕೆ.ಶಿವಕುಮಾರ್

Update: 2018-12-10 16:07 GMT

ಬೆಳಗಾವಿ, ಡಿ.10: ರಾಜಕೀಯ ಮಾಡುವುದನ್ನು ಬಿಟ್ಟು ಬಿಜೆಪಿ ರಾಜ್ಯದ ಅಭಿವೃದ್ಧಿ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಿ. ಅದಕ್ಕೆ ಸರ್ಕಾರ ಸಮರ್ಥವಾಗಿ ಉತ್ತರ ಕೊಡುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿಯವರ ಪ್ರತಿಭಟನೆಗೆ ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳ ಆರೋಪಕ್ಕೆ ಸಮರ್ಪಕ ಉತ್ತರ ನೀಡಲು ಸರ್ಕಾರ ಸಿದ್ಧವಾಗಿದೆ. ಬಿಜೆಪಿ ಸದನದಲ್ಲಿ ಚರ್ಚೆ ನಡೆಸಲಿ. ಅದನ್ನು ಎದುರಿಸಲು ನಾವು ಸಮರ್ಥರಿದ್ದೇವೆ. ಹಸಿರು ಟವಲ್ ಹಾಕಿರುವವರೆಲ್ಲ ರೈತರೇ? ಬಿಜೆಪಿಯವರೇನು ಹೊಲ ಉಳುತ್ತಿದ್ದಾರಾ ಎಂದು ಪ್ರಶ್ನಿಸಿದರು.

ಸಚಿವ ಸಂಪುಟ ವಿಸ್ತರಣೆಯ ದಿನವೇ ಸರಕಾರ ಪತನವಾಗಲಿದೆ ಎಂಬ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಶೋಕ್ ಅವರು ರಾಜಕಾರಣ ಬಿಟ್ಟು ಭವಿಷ್ಯ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಸಿದ್ದರಾಮಯ್ಯ, ದಿನೇಶ್‍ ಗುಂಡೂರಾವ್ ಬಿಟ್ಟು ಎಲ್ಲರೂ ಕೂಡ ಅಧಿವೇಶನಕ್ಕೆ ಹಾಜರಾಗಲಿದ್ದಾರೆ. ಸಿದ್ದರಾಮಯ್ಯ ಪೂರ್ವನಿಯೋಜಿತ ಕಾರ್ಯಕ್ರಮ ನಿಮಿತ್ತ ವಿದೇಶಕ್ಕೆ ಹೋಗಿದ್ದಾರೆ. ದಿನೇಶ್‍ ಗುಂಡೂರಾವ್ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ ಎಂದು ಹೇಳಿದರು.

ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾರೂ ಕೂಡ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಅಲ್ಲಿನ ಅಲ್ಪಸಂಖ್ಯಾತ ಆಡಳಿತ ಮಂಡಳಿ ಕೂಡ ಶ್ರೀಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News