ಪಂಚತಾರಾ ಹೋಟೆಲ್‍ನಲ್ಲಿ ಕುಳಿತು ಆಡಳಿತ ನಡೆಸುವವರಲ್ಲಿ ಕುಮಾರಸ್ವಾಮಿ ಮೊದಲಿಗರು: ಯಡಿಯೂರಪ್ಪ ಟೀಕೆ

Update: 2018-12-10 16:26 GMT

ಬೆಳಗಾವಿ,ಡಿ.10: ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೆ ಫೈವ್ ಸ್ಟಾರ್(ಪಂಚತಾರಾ) ಹೋಟೆಲ್‍ನಲ್ಲಿ ಕುಳಿತು ಕಡತಗಳನ್ನು ವಿಲೇವಾರಿ ಮಾಡುವ ಮುಖ್ಯಮಂತ್ರಿಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಮೊದಲಿಗರು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಯಾವುದೇ ಮುಖ್ಯಮಂತ್ರಿಗಳು ಪಂಚತಾರಾ ಹೋಟೆಲ್‍ನಲ್ಲಿ ಕುಳಿತು ಕಡತಗಳನ್ನು ವಿಲೇವಾರಿ ಮಾಡಿದ ನಿದರ್ಶನಗಳಿಲ್ಲ. ನಾನು ಜನರಿಗೆ ಸಿಗುವ ಸಿಎಂ ಎಂದು ಹೇಳುತ್ತಿರುವ ಕುಮಾರಸ್ವಾಮಿಗೆ ನಾಚಿಕೆಯಾಗಬೇಕೆಂದು ಟೀಕಾಪ್ರಹಾರ ನಡೆಸಿದರು.

ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಯಾರೊಬ್ಬರೂ ಹೋಟೆಲ್‍ನಲ್ಲಿ ಕುಳಿತು ಆಡಳಿತ ನಡೆಸಿರಲಿಲ್ಲ. ವಿಧಾನಸೌಧವನ್ನು ಕಟ್ಟಿರುವುದು ಏತಕ್ಕೆ? ಇಡೀ ಆಡಳಿತವನ್ನು ಫೈವ್ ಸ್ಟಾರ್ ಹೋಟೆಲ್‍ಗೆ ವರ್ಗಾಯಿಸುತ್ತಿರುವುದೇಕೆ. ಮುಖ್ಯಮಂತ್ರಿಯಾದವರು ವಿಧಾನಸೌಧದಲ್ಲಿ ಕುಳಿತು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಇವರು ಯಾರ ಕೈಗೂ ಸಿಗದೆ ತಮ್ಮದೇ ಕೋಟೆಯನ್ನು ನಿರ್ಮಿಸಿಕೊಂಡಿದ್ದಾರೆ. ಇಂಥವರು ಜನಸಾಮಾನ್ಯರ ಮುಖ್ಯಮಂತ್ರಿಯಾಗುವುದು ಸಾಧ್ಯವೇ ಇಲ್ಲ ಎಂದು ಅವರು ಕಿಡಿಕಾರಿದರು. 

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರದ ಅಧಿಕಾರದಲ್ಲಿ ಇದೆಯೋ ಇಲ್ಲವೋ ಎಂಬ ಜಿಜ್ಞಾಸೆ ಜನರಿಗಿದೆ. ಮುಖ್ಯಮಂತ್ರಿ ಸೇರಿದಂತೆ ಸಚಿವರು ಏನು ಮಾಡುತ್ತಿದ್ದಾರೆ. ಜಿಲ್ಲಾ ಪ್ರವಾಸ ಕೈಗೊಂಡಿದ್ದಾರಾ? ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರಾ? ಯಾವುದೂ ಇಲ್ಲ. ಕೇವಲ ತೋರ್ಪಡಿಕೆಗೆ ಮಾತ್ರ ಸರ್ಕಾರ ಅಸ್ತಿತ್ವದಲ್ಲಿದೆ. ಇದು ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 

ರೈತರನ್ನು ಸಾಲ ಮನ್ನಾದಿಂದ ಮುಕ್ತ ಮಾಡಲು ಋಣಮುಕ್ತ ಪತ್ರ ನೀಡುತ್ತಿದ್ದೇವೆ ಎಂಬುದು ಮೂಗಿಗೆ ತುಪ್ಪ ಸವರುವ ಕೆಲಸ. ಈಗಲೂ ರೈತರ ಆತ್ಮಹತ್ಯೆಗಳು ನಿಂತಿಲ್ಲ. ಅನೇಕ ಕಡೆ ರೈತರಿಗೆ ನೋಟಿಸ್ ನೀಡಲಾಗುತ್ತಿದೆ. ಆತ್ಮಹತ್ಯೆ ಸರಣಿಗಳು ಮುಂದುವರೆದಿವೆ. ಸಿಎಂ ತವರು ಕ್ಷೇತ್ರದಲ್ಲೇ ರೈತರಿಗೆ ಬ್ಯಾಂಕ್‍ನವರು ನೋಟಿಸ್ ನೀಡುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ನಮ್ಮನ್ನು ಟೀಕೆ ಮಾಡುತ್ತಾರೆ. ಇದೂ ಒಂದು ಸರಕಾರವೇ ಎಂದು ವಾಗ್ದಾಳಿ ನಡಸಿದರು. 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲವಿದ್ದರೂ ಯಾವ ಸಚಿವರು ಕೂಡ ರೈತರ ಬಗ್ಗೆ ಕಾಳಜಿ ವಹಿಸಿಲ್ಲ. ಸುಮ್ಮನೆ ಉತ್ತರ ಕರ್ನಾಟಕವನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ರಾಜ್ಯದಲ್ಲಿ ನಡೆದಿರುವ ಎಲ್ಲಾ ಅನಾಹುತಗಳ ಬಗ್ಗೆ ಸದನದಲ್ಲಿ ಸರಕಾರದ ಗಮನ ಸೆಳೆಯುವುದಾಗಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News