ಮೊದಲ ದಿನದ ಚಳಗಾಲದ ಅಧಿವೇಶನ: ಅಗಲಿದ ಗಣ್ಯರಿಗೆ ಸಂತಾಪ-ಕಲಾಪ ಮುಂದೂಡಿಕೆ

Update: 2018-12-10 17:04 GMT

ಬೆಳಗಾವಿ,ಡಿ.10: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರ ಸಚಿವ ಅನಂತ್‍ ಕುಮಾರ್, ಮಾಜಿ ಸಚಿವರಾದ ಸಿ.ಕೆ.ಜಾಫರ್ ಷರೀಫ್, ಎಂ.ಎಚ್. ಅಂಬರೀಷ್, ರಾಜ್ಯದ ಮಾಜಿ ಸಚಿವರಾದ ಈ.ಟಿ.ಶಂಭುನಾಥ್, ಓಂಪ್ರಕಾಶ್ ಕಣಗಲಿ, ವಿಮಲಾಬಾಯಿ ದೇಶಮುಖ್, ಮಾಜಿ ಶಾಸಕರಾದ ಮಲ್ಲಪ್ಪ ವೀರಪ್ಪ ಶೆಟ್ಟಿ, ವಿಶ್ವನಾಥ್ ಕರಬಸಪ್ಪ, ಮಹಾಮನಿ, ಎಂ.ಪಿ.ರವೀಂದ್ರ, ಬಾಬುರೆಡ್ಡಿ, ವೆಂಕಪ್ಪ ತುಂಗಳ, ಎಚ್.ಎಸ್.ಪ್ರಕಾಶ್, ಎಂ. ಭಕ್ತವತ್ಸಲ ಅವರ ನಿಧನಕ್ಕೆ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. 

ಸೋಮವಾರ ಮೊದಲ ದಿನದ ಚಳಗಾಲದ ಅಧಿವೇಶನವನ್ನು ಮಾಜಿ ಪ್ರಧಾನಿ ವಾಜಪೇಯಿ ಅವರ ಗೌರವಾರ್ಥ ಮುಂದೂಡುವಂತೆ ಬಿಜೆಪಿ ಮುಖಂಡರು ಆಗ್ರಹಪಡಿಸಿದರು. ಇದನ್ನು ಪರಿಗಣಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು, ಸಾಮಾನ್ಯವಾಗಿ ಹಾಲಿ ಸದಸ್ಯರು ಮೃತಪಟ್ಟಾಗ ಸದನದ ಕಲಾಪ ಮುಂದೂಡುತ್ತೇವೆ. ವಾಜಪೇಯಿಯಂತಹ ಮೇರು ವ್ಯಕ್ತಿ, ಅಜಾತ ಶತ್ರು ಬಗ್ಗೆ ನಮಗೂ ಗೌರವವಿದೆ. ನಿಮ್ಮ ಮನವಿಯನ್ನು ನಾನು ಪರಿಗಣಿಸುತ್ತೇನೆ. ಶ್ರದ್ಧಾಂಜಲಿ ನಂತರ ಕಲಾಪ ಮುಂದೂಡುವುದಾಗಿ ಹೇಳಿದರು.

ವಿಧಾನಸಭೆ ಕಲಾಪ ಆರಂಭದಲ್ಲಿ ಸಂತಾಪ ಸೂಚಕ ನಿರ್ಣಯ ಮಂಡಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಕ್ವಿಟ್ ಇಂಡಿಯಾ ಚಳವಳಿ ಮೂಲಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಜನಸಂಘದಿಂದ ರಾಜಕೀಯ ಪ್ರಾರಂಭಿಸಿ, ಬಿಜೆಪಿಗೆ ಪಾದಾರ್ಪಣೆ ಮಾಡಿ ನಿವೃತ್ತಿಯವರೆಗೂ ಅದೇ ಪಕ್ಷದಲ್ಲಿ ಉಳಿದರು. 5800 ಕಿ.ಮೀ ಉದ್ದದ ಸುವರ್ಣ ಚತುಷ್ಪಥ ರಸ್ತೆ ನಿರ್ಮಿಸಿದ ಹೆಗ್ಗಳಿಕೆ ಇವರದಾಗಿತ್ತು. ಪ್ರೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆಸಿ ವಿಜ್ಞಾನಿಗಳ ಆತ್ಮಸ್ಥೈರ್ಯ ಹೆಚ್ಚಿಸುವುದರ ಮೂಲಕ ಭಾರತದ ಸಾಮರ್ಥ್ಯವನ್ನು ವಿಶ್ವಕ್ಕೆ ಸಾಭೀತುಪಡಿಸಿದರು ಎಂದು ಗುಣಗಾನ ಮಾಡಿದರು. 

1999ರಲ್ಲಿ ಲಾಹೋರ್ ಗೆ ಬಸ್ ಸಂಪರ್ಕ ಕಲ್ಪಿಸುವುದರ ಮೂಲಕ ಪಾಕಿಸ್ತಾನದೊಂದಿಗೆ ಸ್ನೇಹ ಬಾಂಧವ್ಯ ಬೆಸೆದ ಇವರು, ಬಳಿಕ ಪಾಕಿಸ್ತಾನ ತನ್ನ ಮಿತ್ರ ದ್ರೋಹ ಮುಂದುವರೆಸಿದಾಗ ಕಾರ್ಗಿಲ್ ಯುದ್ಧದ ಮೂಲಕ ಪಾಠ ಕಲಿಸಿದ ಬಲಿಷ್ಠ ಪ್ರಧಾನಿ ಎಂದು ಅವರು ಬಣ್ಣಿಸಿದರು.

ಕಾಂಗ್ರೆಸ್‍ನ ಹಿರಿಯ ಮುಖಂಡ ಸಿ.ಕೆ.ಜಾಫರ್ ಶರೀಫ್ 8 ಬಾರಿ ಲೋಕಸಭೆ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ನಾಯಕ. ರೈಲ್ವೇ ಸಚಿವರಾಗಿ ಕರ್ನಾಟಕಕ್ಕೆ ಹೆಚ್ಚು ಕೊಡುಗೆಗಳನ್ನು ನೀಡಿದ ಹೆಗ್ಗಳಿಕೆ ಇವರದು. ನಿಷ್ಠುರವಾದಿ, ನಿಷ್ಕಳಂಕ ವ್ಯಕ್ತಿ ಎಂದು ಬಣ್ಣಿಸಿದರು.

ವಿದ್ಯಾರ್ಥಿ ದೆಸೆಯಿಂದ ಹೋರಾಟ ಮಾಡಿಕೊಂಡು ಬಂದ ಅನಂತ್‍ ಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ 6 ಬಾರಿ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡರು. ಕೇಂದ್ರದ ವಿಮಾನ ಯಾನ ಸಚಿವರಾಗಿ ಹಲವು ಉತ್ತಮ ಕಾರ್ಯ ಮಾಡಿದ್ದರು. ಜನೌಷಧಿ ಮಳಿಗೆಗಳನ್ನು ತೆರೆದ ಧೀಮಂತ ನಾಯಕ. ಇವರ ನಿಧನದಿಂದ ರಾಷ್ಟ್ರಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಕಂಬನಿ ಮಿಡಿದರು. ಹಾಗೆಯೆ ಡಾ.ಎಂ.ಎಚ್.ಅಂಬರೀಶ್ ರಾಜಕೀಯ, ಚಲನಚಿತ್ರ ಕ್ಷೇತ್ರದಲ್ಲೂ ಉತ್ತಮ ಸೇವೆ ಸಲ್ಲಿಸಿದರು. ಕೇಂದ್ರ ಸಚಿವರಾಗಿ, ರಾಜ್ಯ ಸಚಿವರಾಗಿಯೂ ಉತ್ತಮ ಸೇವೆ ಸಲ್ಲಿಸಿದರು ಎಂದು ಬಣ್ಣಿಸಿದರು. ಅಗಲಿದ ಗಣ್ಯರಿಗೆ ಸದನದಲ್ಲಿ ಶ್ರದ್ಧಾಂಜಲಿ ಅರ್ಪಿಸಿ, ಮೃತರ ಗೌರವಾರ್ಥ ಮೌನ ಆಚರಿಸಿ ಕಲಾಪವನ್ನು ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News