ಉಭಯ ಸದನದಲ್ಲಿ ಅಗಲಿದ ಗಣ್ಯರಿಗೆ ಭಾವಪೂರ್ವ ಶ್ರದ್ಧಾಂಜಲಿ

Update: 2018-12-10 17:08 GMT

ಬೆಳಗಾವಿ,ಡಿ.10: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರ ಸಚಿವ ಅನಂತ ಕುಮಾರ್, ಕೇಂದ್ರದ ಮಾಜಿ ಸಚಿವರಾದ ಸಿ.ಕೆ.ಜಾಫರ್ ಷರೀಫ್, ಅಂಬರೀಶ್ ಸೇರಿದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. 

ಸೋಮವಾರ ಬೆಳಗ್ಗೆ ವಿಧಾನಸಭೆ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ರಮೇಶ್‍ ಕುಮಾರ್, ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರ ಸಚಿವ ಅನಂತಕುಮಾರ್, ಕೇಂದ್ರದ ಮಾಜಿ ಸಚಿವರಾದ ಸಿ.ಕೆ.ಜಾಫರ್ ಷರೀಫ್, ನಟ ಅಂಬರೀಶ್, ಮಾಜಿ ಶಾಸಕರಾದ ಎಂ.ಪಿ.ರವೀಂದ್ರ, ಎಚ್.ಎಸ್.ಪ್ರಕಾಶ್ ಹಾಗೂ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿ ನಾಲೆಗೆ ಬಸ್ ಉರುಳಿ ಪ್ರಯಾಣಿಕರು ಮೃತಪಟ್ಟ ವಿಚಾರವನ್ನು ಪ್ರಸ್ತಾಪಿಸಿ ಸಂತಾಪ ಸೂಚಿಸಿದರು. 

ವಿಧಾನಪರಿಷತ್‍ನಲ್ಲೂ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿ ಅಗಲಿದ ಗಣ್ಯರ ಗುಣಗಾನ ಮಾಡಿದರು. 
ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷ ಬೇಧ ಮರೆತು ಸಚಿವರು, ಶಾಸಕರು, ಅಗಲಿದ ಗಣ್ಯರನ್ನು ಸ್ಮರಿಸಿದರು. 

ವಿಧಾನಪರಿಷತ್‍ನಲ್ಲಿ ಸಭಾಪತಿ ಮಂಡಿಸಿದ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಸಭಾನಾಯಕಿ ಹಾಗೂ ಸಚಿವೆ ಡಾ.ಜಯಮಾಲ, ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಸದಸ್ಯರು ಅಗಲಿದ ಗಣ್ಯರ ಗುಣಗಾನ ಮಾಡಿದರು. ಉಭಯ ಸದನಗಳಲ್ಲೂ ಅಗಲಿದ ಗಣ್ಯರ ಗೌರವಾರ್ಥ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News