ಸಮಾಜ ಕಲ್ಯಾಣ ಇಲಾಖೆ ಆದೇಶ ನಿರಾಕರಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ

Update: 2018-12-10 17:31 GMT

ಬೆಂಗಳೂರು, ಡಿ.10: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ನಿರ್ಮಾಪಕರು ಹಾಗೂ ನಿರ್ದೇಶಕರ ಸಿನಿಮಾಗಳನ್ನು ಜಿಲ್ಲಾ ಕೇಂದ್ರಗಳ ಸಿನಿಮಾ ಮಂದಿರಗಳಲ್ಲಿ ಉಚಿತವಾಗಿ ಪ್ರದರ್ಶಿಸಲು ಸಮಾಜ ಕಲ್ಯಾಣ ಇಲಾಖೆ ಆದೇಶಿಸಿರುವುದನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರಾಕರಿಸಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಸೇರಿದವರು ನಿರ್ಮಾಣ ಮಾಡಿದ, ನಿರ್ದೇಶಿಸಿದ ಚಿತ್ರಗಳನ್ನು ಉಚಿತವಾಗಿ ತೋರಿಸುವ ವಿಚಾರದಲ್ಲಿ ಸರಕಾರದ ಜೊತೆ ಕೈಜೋಡಿಸಲು ವಾಣಿಜ್ಯ ಮಂಡಳಿ ನಿರಾಕರಿಸಿದ್ದು, ವಾರಾಂತ್ಯದಲ್ಲಿ ನಡೆದ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಯಾರ ಹೆಸರನ್ನೂ ಶಿಫಾರಸು ಮಾಡಬಾರದು ಎಂಬ ತೀರ್ಮಾನವನ್ನು ಸಭೆ ಕೈಗೊಂಡಿದೆ ಎಂದು ಗೊತ್ತಾಗಿದೆ. ನಮ್ಮಲ್ಲಿ ಜಾತಿ ಭೇದ ಇಲ್ಲ. ನಾವೆಲ್ಲ ಒಂದೇ ಎನ್ನುವ ಒಕ್ಕೊರಲ ತೀರ್ಮಾನ ಸಭೆಯಲ್ಲಿ ಆಗಿದ್ದು, ಚಿತ್ರಗಳ ಆಯ್ಕೆ ವಿಚಾರದಲ್ಲಿ ಜಾತಿಯನ್ನು ಆಧಾರವಾಗಿ ಇರಿಸಿಕೊಳ್ಳುವ ಕ್ರಮಕ್ಕೆ ಬೆಂಬಲ ಕೊಡುವುದು ಬೇಡ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿರುವುದು ಸ್ಪಷ್ಟವಾಗಿದೆ.

ಇಲಾಖೆ ಪತ್ರ: ಸಿನಿಮಾಗಳ ಉಚಿತ ಪ್ರದರ್ಶನಕ್ಕೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ನಿರ್ದೇಶಕ ಅಥವಾ ನಿರ್ಮಾಪಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದೂ ಇಲಾಖೆಯ ಪತ್ರದಲ್ಲಿ ಹೇಳಲಾಗಿದ್ದು, ಆಯ್ಕೆ ಸಮಿತಿಗೆ ಬೇಕಿರುವ ಇಬ್ಬರು ಸಮಾಜದ ಹಿತ ಚಿಂತಕರಾಗಿರಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ನವೆಂಬರ್ ತಿಂಗಳ ಕೊನೆಯಲ್ಲಿ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದ ಸಮಾಜ ಕಲ್ಯಾಣ ಇಲಾಖೆ, ಉಚಿತ ಪ್ರದರ್ಶನಕ್ಕೆ ಅರ್ಹವಾಗುವ ಸಿನಿಮಾಗಳನ್ನು ಆಯ್ಕೆ ಮಾಡಲು ರಚಿಸಲಾಗಿರುವ ಆಯ್ಕೆ ಸಮಿತಿಗೆ ಇಬ್ಬರ ಹೆಸರು ಸೂಚಿಸಬೇಕು ಎಂದು ಕೋರಿತ್ತು. 

ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಅವರೆಲ್ಲ ತಮ್ಮ ಪಾತ್ರಗಳ ಮೂಲಕ ಜಾತಿಯನ್ನೇ ಮೀರಿದ್ದಾರೆ. ಅಲ್ಲದೆ, ಕನ್ನಡ ಚಿತ್ರರಂಗಕ್ಕೆ ಜಾತಿಯ ಲೇಪ ಬೇಕಿಲ್ಲ. ಸರಕಾರ ಕೈಗೊಂಡಿರುವ ತೀರ್ಮಾನ ತಪ್ಪು. ಈ ತಪ್ಪಿನಲ್ಲಿ ನಾವು ಭಾಗಿಯಾಗುವುದು ಬೇಡ.

-ಉಮೇಶ್ ಬಣಕಾರ್, ಸಮಿತಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News