ಶಾಸಕರನ್ನು ವಿಶ್ವಾಸಕ್ಕೆ ತರುವಲ್ಲಿ 'ಕೈ' ನಾಯಕರು ಯಶಸ್ವಿ: ಅಧಿವೇಶನದಲ್ಲಿ ಭಾಗಿ

Update: 2018-12-10 17:42 GMT

ಬೆಳಗಾವಿ, ಡಿ.10: ಸಂಪುಟ ವಿಸ್ತರಣೆ ಹಾಗೂ ವಿವಿಧ ಕಾರಣಗಳಿಂದ ಅಸಮಾಧಾನಗೊಂಡಿದ್ದ ಕಾಂಗ್ರೆಸ್‍ನ ಶಾಸಕರ ಗುಂಪನ್ನು ಮನವೊಲಿಸಿ ಅಧಿವೇಶನದಲ್ಲಿ ಭಾಗವಹಿಸುವಂತೆ ಮಾಡಲು ಹಿರಿಯ ನಾಯಕರು ಯಶಸ್ವಿಯಾಗಿದ್ದಾರೆ.

ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡಿದ್ದ ಬಹಳಷ್ಟು ನಾಯಕರು ಅಧಿವೇಶನದಿಂದ ಹೊರಗುಳಿಯುವ ಮುನ್ಸೂಚನೆ ನೀಡಿದ್ದರು. ಇದು ಮೈತ್ರಿ ಸರಕಾರಕ್ಕೆ ಮುಜುಗರ ಉಂಟು ಮಾಡುವ ಪರಿಸ್ಥಿತಿ ನಿರ್ಮಿಸಿತ್ತು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ  ಸಿದ್ದರಾಮಯ್ಯ ಅವರು ವಿದೇಶಿ ಪ್ರವಾಸ ಕೈಗೊಂಡಿದ್ದರು. ದಿನೇಶ್‍ ಗುಂಡೂರಾವ್ ಕೂಡ ಅಧಿವೇಶನದಲ್ಲಿ ಭಾಗವಹಿಸದೆ ವಿವಿಧ ಜಿಲ್ಲೆಗಳ ಪ್ರವಾಸದಲ್ಲಿ ತೊಡಗಿಸಿಕೊಂಡಿದ್ದರು. ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಮೊದಲ ದಿನ ಅಧಿವೇಶನದಲ್ಲಿ ಭಾಗವಹಿಸಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳು ಸಮ್ಮಿಶ್ರ ಸರ್ಕಾರದ ಮೈತ್ರಿಯಲ್ಲಿ ಸಮಸ್ಯೆ ಇದೆ ಎಂಬುದನ್ನು ತೋರಿಸುತ್ತಿತ್ತು.

ವಿದೇಶಕ್ಕೆ ತೆರಳುವ ಮುನ್ನ ಸಿದ್ದರಾಮಯ್ಯ ಅವರು ಅತೃಪ್ತ ಶಾಸಕರಿಗೆ ಖಡಕ್ ಸೂಚನೆ ನೀಡಿದ್ದು, ಅಧಿವೇಶನಕ್ಕೆ ಯಾರು ಗೈರು ಹಾಜರಾಗಬಾರದು. ಹಾಜರಿರಲೇಬೇಕೆಂದು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿವೇಶನದಿಂದ ಹೊರಗುಳಿಸುವ ಸೂಚನೆ ನೀಡಿದ್ದ ಬಹುತೇಕ ಶಾಸಕರು ಅಧಿವೇಶನದಲ್ಲಿ ಭಾಗವಹಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ರಮೇಶ್‍ ಜಾರಕಿಹೊಳಿ, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಸುಧಾಕರ್ ಹೊರತು ಪಡಿಸಿ ಉಳಿದಂತೆ ಬಹುತೇಕ ಪ್ರಮುಖ ಶಾಸಕರು ಕಲಾಪಕ್ಕೆ ಹಾಜರಾಗಿದ್ದಾರೆ.

ಉಪ ಚುನಾವಣೆಯಲ್ಲಿ ಗೆದ್ದು ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಆನಂದ್ ನ್ಯಾಮೇಗೌಡ, ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅನಿತಾ ಕುಮಾರಸ್ವಾಮಿ ಅವರು ಕಲಾಪದಲ್ಲಿ ಭಾಗವಹಿಸ್ದಿರು. 

ಬಿಜೆಪಿಯ ಹಿರಿಯ ಶಾಸಕ ಸಿ.ಟಿ.ರವಿ ಅವರು ಕೊರಳಿಗೆ ಹಸಿರು ಶಲ್ಯಾ ಧರಿಸಿ ಕಲಾಪದಲ್ಲಿ ಭಾಗವಹಿಸಿ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News