ಶಿವಮೊಗ್ಗ: 16 ಸಾವಿರ ಹೆಕ್ಟೇರ್ ಭತ್ತದ ಬೆಳೆ ಸಂಪೂರ್ಣ ನಾಶ; ನಷ್ಟ ಪರಿಹಾರಕ್ಕೆ ಒತ್ತಾಯ

Update: 2018-12-10 18:27 GMT

ಶಿವಮೊಗ್ಗ, ಡಿ.10: ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ವ್ಯಾಪ್ತಿಯ ನೂರಾರು ಹಳ್ಳಿಗಳ ಸುಮಾರು 16 ಸಾವಿರ ಹೆಕ್ಟೇರ್ ಭತ್ತದ ಬೆಳೆಗೆ ಕಂದುಜಿಗಿ ಹುಳುವಿನ ಭಾದೆ ತಗುಲಿದ ಪರಿಣಾಮ, ರೈತರು ಕೊಟ್ಯಾಂತರ ರೂ ಮೌಲ್ಯದ ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂದು ಮಾಜಿ ಜಿಲ್ಲಾ ಪಂ. ಸದಸ್ಯ ಈಸೂರು ಬಸವರಾಜ್ ತಿಳಿಸಿದ್ದಾರೆ. 

ಈ ಕುರಿತಂತೆ ಸೋಮವಾರ ಪತ್ರಿಕಾ ಹೇಳಿಕೆಯನ್ನು ಅವರು ಬಿಡುಗಡೆ ಮಾಡಿದ್ದಾರೆ. ಭತ್ತದ ಬೆಳೆ ಹಾನಿಯಿಂದ ದಿಕ್ಕು ತೋಚದಂತಾಗಿರುವ ರೈತ ಸಮುದಾಯ ಆತ್ಮಹತ್ಯೆ ಮಾರ್ಗ ಹಿಡಿಯುವ ಮುನ್ನ, ಮುಖ್ಯಮಂತ್ರಿಗಳು ಸಹಾಯಹಸ್ತ ಚಾಚಬೇಕಾಗಿದೆ. ಬೆಳೆ ನಷ್ಟಕ್ಕೀಡಾದ ರೈತನಿಗೆ, ತಲಾ ಒಂದು ಎಕರೆಗೆ ಕನಿಷ್ಠ 30 ಸಾವಿರ ರೂ. ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ. 

ಕಾಲಕಾಲಕ್ಕೆ ಗೊಬ್ಬರ, ಕಳೆ, ಔಷದಿ ಸಿಂಪಡಿಸಿ ಎಕರೆಗೆ ಕನಿಷ್ಠ 25 ಸಾವಿರ ರೂ. ವೆಚ್ಚಮಾಡಿ ಬೆಳೆದಿದ್ದ ಭತ್ತ ಕಟಾವಿಗೆ 15 ದಿನದ ಅವಧಿಯಲ್ಲಿ ರೋಗಕ್ಕೆ ತುತ್ತಾಗುವಂತಾಗಿದೆ. ರೈತನನ್ನು ಸಂಪೂರ್ಣವಾಗಿ ಸರ್ವನಾಶ ಮಾಡುವ ಹಂತ ತಲುಪಿದೆ. ದಿಕ್ಕೇ ತೋಚದಂತ ಸ್ಥಿತಿ ಉಂಟು ಮಾಡಿದೆ. ಈ ಭಾಗದ ಸಮಸ್ಯೆಯನ್ನು ಅರಿಯಲು, ಈ ಕೂಡಲೇ ತಜ್ಞ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. 

ಕಲ್ಮನೆ, ಹಿತ್ತಲ, ಅರಿಶಿಣಗೆರೆ, ಸಾಲೂರು, ಚುರ್ಚುಗುಂಡಿ, ಈಸೂರು, ಗಾಮ, ಓತನಕಟ್ಟೆ, ಚುಂಚಿನಕೊಪ್ಪ, ನೆಲಬಾಗಿಲು, ಅಂಬಾರಗೊಪ್ಪ, ಮತ್ತಿಕೋಟೆ, ಶಿಕಾರಿಪುರ ಸೇರಿದಂತೆ ನೂರಾರು ಹಳ್ಳಿಗಳ ರೈತರು ಸಂಕಷ್ಟಕ್ಕೀಡಾಗುವಂತಾಗಿದೆ. ಬ್ಯಾಂಕ್-ಸೊಸೈಟಿಗಳಲ್ಲಿ ಸಾಲ ಸೌಲಭ್ಯವೂ ದೊರಕದೆ, ಊಟಕ್ಕೆ ಭತ್ತವೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸರ್ಕಾರ ಈ ಸಂದರ್ಭದಲ್ಲಿ ರೈತನ ನೆರವಿಗೆ ಮುಂದಾಗಬೇಕೆಂದು ಈಸೂರು  ಬಸವರಾಜ್ ಮನವಿ ಮಾಡಿದ್ದಾರೆ. 

ಈ ಭಾಗದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಸಂಸದರಾದ ಬಿ.ವೈ.ರಾಘವೇಂದ್ರ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಧಿವೇಶನದಲ್ಲಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಈ ಅನ್ನದಾತರತ್ತ ಗಮಹರಿಸಬೇಕೆಂದು ಅವರು ಕೋರಿದ್ದಾರೆ.

ಮೆಕ್ಕೆಜೋಳವೂ ನಾಶ: ಇದೇ ವ್ಯಾಪ್ತಿಯಲ್ಲಿ ಭತ್ತದ ಜೊತೆ ಬೆಳೆದಿದ್ದ ಮೆಕ್ಕೆಜೋಳ ಸಹ ಕಾಳು ಕಟ್ಟುವ ಪೂರ್ವದಲ್ಲಿ ಮಳೆಬಾರದ ಹಿನ್ನೆಲೆಯಲ್ಲಿ, ಶೇ.70 ರಷ್ಟು ಫಸಲು ನಾಶವಾಗಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಹಾಗೂ ಹೆಚ್ಚುವರಿ ಪರಿಹಾರ ನೀಡುವಂತೆ ಈಸೂರು ಬಸವರಾಜ್ ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News