ಬರ ನಿರ್ವಹಣೆಯಲ್ಲಿ ಸಮ್ಮಿಶ್ರ ಸರಕಾರ ವಿಫಲ: ಕೋಟ ಶ್ರೀನಿವಾಸ ಪೂಜಾರಿ

Update: 2018-12-11 17:12 GMT

ಬೆಳಗಾವಿ,ಡಿ.11: ರಾಜ್ಯದಲ್ಲಿ ಎದುರಾಗಿರುವ ಬರಗಾಲವನ್ನು ನಿರ್ವಹಣೆ ಮಾಡುವಲ್ಲಿ ರಾಜ್ಯದ ಸಮ್ಮಿಶ್ರ ಸರಕಾರ ವಿಫಲವಾಗಿದ್ದು, ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಮಂಗಳವಾರ ವಿಧಾನ ಪರಿಷತ್ತಿನಲ್ಲಿ ನಿಯಮ 68ರಡಿ ಬರಗಾಲ ಕುರಿತು ಮಾತನಾಡಿದ ಅವರು, 100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿದೆ. ಕುಡಿಯಲು ನೀರು, ಜಾನುವಾರುಗಳಿಗೆ ಮೇವು, ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜನರು ಗುಳೇ ಹೋಗುತ್ತಿದ್ದಾರೆ. ಆದರೂ, ಈ ಸರಕಾರ  ಕಣ್ಮುಚ್ಚಿ ಕುಳಿತಿದೆಯೇ ಎಂದು ಪ್ರಶ್ನಿಸಿದರು.

ಈವರೆಗೂ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಟ್ಯಾಂಕರ್ ವ್ಯವಸ್ಥೆ ಕಲ್ಪಿಸಿಲ್ಲ. ಜಾನುವಾರುಗಳಿಗೆ ಮೇವು ಪೂರೈಕೆ ಮಾಡುವ ಮೇವು ಬ್ಯಾಂಕ್ ಕೂಡ ತೆರೆದಿಲ್ಲ. ಈ ಸರಕಾರ ಜನರ ಪಾಲಿಗೆ ಇದ್ದು ಇಲ್ಲದಂತಾಗಿದೆ ಎಂದು ಟೀಕಿಸಿದರು.

ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ  ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಸುಮಾರು 46 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ರೈತರು ಬ್ಯಾಂಕ್ ನೋಟಿಸ್‍ಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಹಳೆ ಸಾಲ ಚುಕ್ತ ಮಾಡುವವರೆಗೂ ಹೊಸ ಸಾಲ ಕೊಡುವುದಿಲ್ಲ ಎಂದು ಹೇಳುತ್ತಿರುವುದರಿಂದ ರೈತರು ದಿಕ್ಕು ಕಾಣದಂತಾಗಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರುಗಳು, ಅಧಿಕಾರಿಗಳು, ಬರಪೀಡಿತ ತಾಲೂಕುಗಳಿಗೆ ಎಷ್ಟು ಬಾರಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕೇವಲ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದರೆ ಸಮಸ್ಯೆ ಪರಿಹಾರವಾದೀತೆ. ಪ್ರತಿಯೊಬ್ಬರನ್ನು ಹಳ್ಳಿಗಳಿಗೆ ಹೋಗುವಂತೆ ಸೂಚನೆ ಕೊಡಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News