ರೈತರ ಸಾಲ ಮನ್ನಾಕ್ಕೆ ಮಾರ್ಗಸೂಚಿ ಸೂತ್ರಗಳು ಬೇಡ: ಯಡಿಯೂರಪ್ಪ

Update: 2018-12-11 17:35 GMT

ಬೆಳಗಾವಿ, ಡಿ.11: ರೈತರ ಸಾಲ ಮನ್ನಾ ವಿಷಯದಲ್ಲಿ ಸರಕಾರ ಸುಮಾರು 52 ಮಾರ್ಗಸೂಚಿ ಸೂತ್ರಗಳನ್ನು ಅನುಸರಿಸುವುದು ಸರಿಯಲ್ಲವೆಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಬರಗಾಲದ ವಿಷಯದ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ರೈತರ ಸಾಲ ಮನ್ನಾ ಕುರಿತು ಘೋಷಣೆ ಮಾಡುವಷ್ಟು, ಅದರ ಪ್ರಕ್ರಿಯೆಗಳು ಸುಲಭವಾಗಿಲ್ಲ. ರೈತರ ಸಾಲ ಮನ್ನಾ ಆಗಬೇಕಾದರೆ ರೈತರ ಆದಾಯ ಮಿತಿಯ ಪ್ರಮಾಣ ಇಂತಿಷ್ಟು ಇರಬೇಕು ಸೇರಿದಂತೆ 52 ಮಾರ್ಗಸೂಚಿ ಸೂತ್ರಗಳನ್ನು ವಿಧಿಸಿದೆ. ಈ ಪ್ರಕಾರ ಹೋದರೆ, ಯಾವೊಬ್ಬ ರೈತರ ಸಾಲ ಮನ್ನಾ ಆಗುವುದಿಲ್ಲವೆಂದು ತಿಳಿಸಿದರು.

ರೈತರ ಸಾಲ ಮನ್ನಾ ವಿಷಯದಲ್ಲಿ ಇನ್ನೂ ಸಾಕಷ್ಟು ಗೊಂದಲಗಳಿವೆ. ರಾಷ್ಟ್ರೀಕೃತ ಬ್ಯಾಂಕ್‍ಗಳ ಜತೆ ಚರ್ಚೆ ಸಂಪೂರ್ಣವಾಗಿರುವ ಕುರಿತು ಮಾಹಿತಿಯಿಲ್ಲ. ಬ್ಯಾಂಕ್‍ಗಳು ಸಾಲ ಹಾಗೂ ಬಡ್ಡಿ ಎರಡಕ್ಕೂ ಒಪ್ಪಿದೆಯೇ ಎಂಬುದರ ಬಗ್ಗೆ ಜನತೆಗೆ ಖಚಿತಪಡಿಸಬೇಕು. ಈ ಬಗ್ಗೆ ಅಧಿಕಾರಿಗಳ ಬಳಿ ಸ್ಪಷ್ಟವಾದ ದಾಖಲೆಗಳಿಲ್ಲ. ಇವೆಲ್ಲ ಗೊಂದಲಗಳಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿಯ ಕೆಲವೆ ದಿನಗಳಲ್ಲಿ ರೈತರ ಸಾಲಮನ್ನಾ ಮಾಡಲಿದ್ದೇವೆ ಎಂಬ ಹೇಳಿಕೆಗಳು ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News