ಮಧ್ಯ ಪ್ರದೇಶ: ಸರಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ ಕಾಂಗ್ರೆಸ್

Update: 2018-12-12 08:43 GMT

ಭೋಪಾಲ್, ಡಿ.12: ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತ ಗಳಿಸಲು ಎರಡು ಸ್ಥಾನ ಕಡಿಮೆಯಾದರೂ ಬಿಎಸ್‍ಪಿ ನಾಯಕಿ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಬೆಂಬಲ ಸೂಚಿಸಿದ ನಂತರ ಕಾಂಗ್ರೆಸ್ ನಿರಾಳವಾಗಿದೆ. ಈಗಾಗಲೇ ಪಕ್ಷದ ನಾಯಕರಾದ ಕಮಲ್ ನಾಥ್, ದಿಗ್ವಿಜಯ್ ಸಿಂಗ್ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಜತೆಯಾಗಿಯೇ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಬಳಿಗೆ ತೆರಳಿ ಸರಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ.

ಇದರೊಂದಿಗೆ ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಆರಂಭಗೊಳ್ಳುವ ಸೂಚನೆಯಿದೆ. ಹಿರಿಯ ನಾಯಕ ಕಮಲ್‍ನಾಥ್ ಸಿಎಂ ಹುದ್ದೆಯ ಆಕಾಂಕ್ಷಿಗಳಲ್ಲಿ ಪ್ರಮುಖರಾಗಿದ್ದಾರೆ. ಆದರೆ ಪಕ್ಷದ ಕಚೇರಿಯಲ್ಲಿನ ಇಂದಿನ ಬೆಳವಣಿಗೆಗಳನ್ನು ಗಮನಿಸಿದಾಗ  ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಸಿಎಂ ಹುದ್ದೆಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮುಂದೆ ಬೇಡಿಕೆಯಿಡಬಹುದೆಂದು ಹೇಳಲಾಗುತ್ತಿದೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಕಮಲ್‍ ನಾಥ್ ಅವರ ಬೆಂಬಲಿಗರು ಹಾಗೂ ಪ್ರಚಾರ ಸಮಿತಿ ಮುಖ್ಯಸ್ಥರಾಗಿರುವ ಸಿಂಧಿಯಾ ಬೆಂಬಲಿಗರು  ಪಕ್ಷದ ಕಚೇರಿ ಮುಂದೆ ಘೋಷಣೆ ಕೂಗುತ್ತಿರುವುದೂ ಇಂದು ಬೆಳಿಗ್ಗೆ ಕಂಡು ಬಂದಿದೆ.

ಕಮಲ್‍ ನಾಥ್ ರಿಗೆ ಇನ್ನೊಬ್ಬ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ರ ಬೆಂಬಲವಿದೆಯೆಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಒಗ್ಗಟ್ಟನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸಿರುವ ಸಿಂಧಿಯಾ ಅವರಿಗೆ ಡಿಸಿಎಂ ಹುದ್ದೆ ದೊರೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ನಿನ್ನೆಯ ತನಕ ಕಾಂಗ್ರೆಸ್ ಕಚೇರಿ ಹೊರಭಾಗದಲ್ಲಿ ಕಮಲ್‍ನಾಥ್ ಅವರ ಪೋಸ್ಟರ್ ಮಾತ್ರ ಇದ್ದರೆ ಇಂದು ಸಿಂಧಿಯಾ ಪರ ಹಲವಾರು ಪೋಸ್ಟರುಗಳು ಕಾಣಿಸಿವೆ. ರಾಜ್ಯದಲ್ಲಿ ಕಾಂಗ್ರೆಸ್ ವಿಜಯದಲ್ಲಿ 71 ವರ್ಷದ ಕಮಲ್ ನಾಥ್ ಅವರ ಸಾಕಷ್ಟು ಶ್ರಮ ಹಾಗೂ ತಂತ್ರಗಾರಿಕೆಯಿರುವುದು ನಿಜವಾದರೂ  ಸಿಂಧಿಯಾ ಅವರು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News