14,000 ಅಡಿ ಎತ್ತರದಿಂದ ಜಿಗಿದ 102 ವರ್ಷದ ಅಜ್ಜಿ !

Update: 2018-12-12 16:01 GMT

ಸಿಡ್ನಿ, ಡಿ. 12: 102 ವರ್ಷದ ಅಜ್ಜಿಯೊಬ್ಬರು ದಕ್ಷಿಣ ಆಸ್ಟ್ರೇಲಿಯದ ಆಕಾಶದಲ್ಲಿ 14,000 ಅಡಿ ಎತ್ತರದಿಂದ ಜಿಗಿಯುವ ಮೂಲಕ ಜಗತ್ತಿನ ಸಂಭಾವ್ಯ ಅತಿ ಹಿರಿಯ ‘ಸ್ಕೈಡೈವರ್’ ಆಗಿದ್ದಾರೆ.

‘‘ಈ ಯಾನದ ವೇಳೆ ನಾನು ಸಾಮಾನ್ಯ ರೀತಿಯಲ್ಲಿಯೇ ಇದ್ದೆ’’ ಎಂದು ಧೀರ ಅಜ್ಜಿ ಐರೀನ್ ಓ’ಶೀ ಬಳಿಕ ಹೇಳಿದರು.

ತನ್ನ 100ನೇ ಹುಟ್ಟುಹಬ್ಬದ ದಿನದಂದು 2016ರಲ್ಲಿ ಅವರು ಮೊದಲ ಸ್ಕೈಡೈವ್ ಮಾಡಿದ್ದರು. ಆದರೆ, ಅವರಿಗೆ ಇತಿಹಾಸದ ಪುಸ್ತಕದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದು ರವಿವಾರದಂದು 102 ವರ್ಷ ಮತ್ತು 194 ದಿನಗಳ ಪ್ರಾಯದ ಅಜ್ಜಿ ನಡೆಸಿದ ಯಶಸ್ವಿ ಆಕಾಶ ಹಾರಾಟ ಎಂದು ಸಂಘಟಕರು ಹೇಳುತ್ತಾರೆ.

‘‘ಅಲ್ಲಿ ಮೇಲೆ ಆಕಾಶ ಶುಭ್ರವಾಗಿತ್ತು. ಹವಾಮಾನ ಚೆನ್ನಾಗಿತ್ತು, ಆದರೆ ಅಲ್ಲಿ ತುಂಬಾ ಚಳಿಯಿತ್ತು’’ ಎಂದು ಓಶೀ ಹೇಳಿರುವುದಾಗಿ ಆಸ್ಟ್ರೇಲಿಯದ ಮಾಧ್ಯಮಗಳು ವರದಿ ಮಾಡಿವೆ.

ಅಜ್ಜಿಯ ಮಗಳು ‘ಮೋಟರ್ ನ್ಯೂರಾನ್’ ಎಂಬ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಈ ರೋಗದಿಂದ ಬಳಲುತ್ತಿರುವವರಿಗೆ ನೆರವು ನೀಡುವ ಸಂಸ್ಥೆಯೊಂದರ ಪರವಾಗಿ ನಿಧಿ ಸಂಗ್ರಹಿಸುವುದಕ್ಕಾಗಿ ಅವರು ಸಾಹಸ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News