ಗುಜರಾತ್ ಎನ್‌ಕೌಂಟರ್ ಪ್ರಕರಣಗಳ ವರದಿ ಸೋರಿಕೆ: ನಿವೃತ್ತ ನ್ಯಾಯಮೂರ್ತಿಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

Update: 2018-12-12 17:41 GMT

ಹೊಸದಿಲ್ಲಿ, ಡಿ. 12: ಗುಜರಾತ್ ಎನ್‌ಕೌಂಟರ್ ಪ್ರಕರಣದ ಅಂತಿಮ ವರದಿಯನ್ನು ನೀವು ಸಮಿತಿಯ ಇತರ ಸದಸ್ಯರೊಂದಿಗೆ ಹಂಚಿಕೊಂಡಿದ್ದೀರಾ ಎಂದು ಗುಜರಾತ್ ಎನ್‌ಕೌಂಟರ್ ತನಿಖೆಯ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರಲ್ಲಿ ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ.

ಗುಜರಾತ್‌ನಲ್ಲಿ 2002ರಿಂದ 2006ರ ವರೆಗೆ ನಡೆದ ಎನ್‌ಕೌಂಟರ್‌ಗಳ ತನಿಖೆಯ ಮೇಲುಸ್ತುವಾರಿ ಸಮಿತಿಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಬೇಡಿ ಅವರನ್ನು ಸುಪ್ರೀಂ ಕೋರ್ಟ್ ನಿಯೋಜಿಸಿತ್ತು. ಮೇಲುಸ್ತುವಾರಿ ಸಮಿತಿ ತನ್ನ ವರದಿಯನ್ನು ಈ ವರ್ಷ ಫೆಬ್ರವರಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ವರದಿ ಬಹಿರಂಗವಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು. ವರದಿ ಬಹಿರಂಗವಾಗಿರುವುದಕ್ಕೆ ಗುಜರಾತ್ ಸರಕಾರ ಆಕ್ಷೇಪ ವ್ಯಕ್ತಪಡಿಸಿತು.

ಅಂತಿಮ ವರದಿಯಲ್ಲಿ ಅಭಿವ್ಯಕ್ತಿಸಲಾದ ನಿಲುವುಗಳು ಏಕಪಕ್ಷೀಯವಾಗಿ ನ್ಯಾಯಮೂರ್ತಿಯದ್ದೇ ಹಾಗೂ ಅವರು ಅದನ್ನು ಮೇಲುಸ್ತುವಾರಿ ಸಮಿತಿಯ ಇತರ ಸದಸ್ಯರೊಂದಿಗೆ ಹಂಚಿ ಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಪ್ರತಿಪಾದಿಸಿತು. ಸುಪ್ರೀಂ ಕೋರ್ಟ್‌ನಲ್ಲಿ ಎತ್ತಲಾದ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಪೀಠ ನಿವೃತ್ತ ನ್ಯಾಯಮೂರ್ತಿ ಬೇಡಿ ಅವರಿಗೆ ತಿಳಿಸಿತು. ‘‘ಮೇಲುಸ್ತುವಾರಿ ಸಮಿತಿಯ ಸದಸ್ಯರೊಂದಿಗೆ ಅಂತಿಮ ವರದಿ ಹಂಚಿಕೊಂಡಿ ದ್ದೀರಾ ಎಂಬ ಬಗ್ಗೆ ಅಧ್ಯಕ್ಷರು ನಮಗೆ ದೃಢಪಡಿಸಬೇಕು’’ ಎಂದು ಪೀಠ ಹೇಳಿತು. ಸ್ವತಂತ್ರ ತನಿಖೆ ಅಥವಾ ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಹೊರಬರಬಹುದು. ಆದುದರಿಂದ ಗುಜರಾತ್ ಎನ್‌ಕೌಂಟರ್‌ನ ತನಿಖೆಯನ್ನು ಅದಕ್ಕೆ ವಹಿಸಲು ನಿರ್ದೇಶನ ನೀಡುವಂತೆ ಕೋರಿ ಹಿರಿಯ ಪತ್ರಕರ್ತ ಬಿ.ಜಿ. ವರ್ಗೀಸ್ ಹಾಗೂ ಕವಿ, ಗೀತರಚನೆಕಾರ ಜಾವೆದ್ ಅಖ್ತರ್ 2007ರಲ್ಲಿ ಸಲ್ಲಿಸಿದ ಎರಡು ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಿತು. ವರ್ಗೀಸ್ ಅವರು 2004 ಡಿಸೆಂಬರ್ 30ರಂದು ನಿಧನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News