ಇನ್ನು ಮುಂದೆ ಪಾನ್ ಕಾರ್ಡ್‌ನಲ್ಲಿ ತಂದೆಯ ಹೆಸರು ಕಡ್ಡಾಯವಲ್ಲ

Update: 2018-12-12 18:03 GMT

ಹೊಸದಿಲ್ಲಿ, ಡಿ. 12: ಪಾನ್ ಕಾರ್ಡ್ (ಖಾಯಂ ಖಾತೆ ಸಂಖ್ಯೆ)ನಲ್ಲಿ ಇನ್ನು ಮುಂದೆ ತಂದೆಯ ಹೆಸರು ಕಡ್ಡಾಯವಲ್ಲ.

ತಂದೆಯ ಹೆಸರನ್ನು ಬಹಿರಂಗಪಡಿಸಲು ಬಯಸದೆ ತಾಯಿಯ ಹೆಸರು ನಮೂದಿಸಿ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ‘ಸಿಂಗಲ್ ಮದರ್’ ಮಕ್ಕಳಿಗೆ ಅವಕಾಶ ನೀಡಲು ಸರಕಾರ ಈ ತಿದ್ದುಪಡಿ ತಂದಿದೆ. ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ನಿರ್ದೇಶನದಂತೆ ಡಿಸೆಂಬರ್ 5ರಂದು ಈ ನಿಯಮ ಅನುಷ್ಠಾನಕ್ಕೆ ಬಂದಿದೆ.

ಕೆಲವು ಸಮಯದ ಹಿಂದೆ ಇದೇ ನಿಯಮವನ್ನು ಪಾಸ್‌ಪೋರ್ಟ್‌ಗೆ ಸಂಬಂಧಿಸಿದಂತೆ ಜಾರಿ ಮಾಡಲಾಗಿತ್ತು. ತಾಯಿ ‘ಸಿಂಗಲ್ ಪೇರೆಂಟ್’ ಆಗಿದ್ದರೆ ಅಥವಾ ತಾಯಿಯ ಹೆಸರನ್ನು ಬರೆಯಲು ಇಚ್ಛೆಯಿಲ್ಲದೇ ಇದ್ದರೆ ಅರ್ಜಿದಾರರಿಗೆ ಅರ್ಜಿಯಲ್ಲಿ ಅಯ್ಕೆ ನೀಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ನೇರ ತೆರಿಗೆಗಳ ಕೇಂದ್ರ ಮಂಡಳಿ ಹೇಳಿದೆ. ನಮ್ಮ ಮನವಿ ಸ್ವೀಕರಿಸಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪಾನ್ ಕಾರ್ಡ್ ಅರ್ಜಿಯಲ್ಲಿ ತಿದ್ದುಪಡಿ ಮಾಡಿರುವುದು ನಮಗೆ ಸಂತಸ ತಂದಿದೆ ಎಂದು ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ.

ಪ್ರಸ್ತುತ ಪಾನ್ ಕಾರ್ಡ್ ಪೂರೈಸಲು ತಂದೆ ಹೆಸರನ್ನು ನೀಡಬೇಕಾಗಿರುವುದು ಕಡ್ಡಾಯ. ಅಧಿಸೂಚನೆಯ ಹಿನ್ನೆಲೆಯಲ್ಲಿ ‘ಸಿಂಗಲ್ ಪೇರೆಂಟ್’ ತಾಯಿ ಇರುವವರು ಹಾಗೂ ತ್ಯಜಿಸಿದ ಅಥವಾ ತೀರಿಕೊಂಡ ತಂದೆಯ ಬದಲಾಗಿ ತಾಯಿಯ ಹೆಸರನ್ನು ಪಾನ್ ಕಾರ್ಡ್‌ನಲ್ಲಿ ನಮೂದಿಸಲು ಬಯಸುವವರ ಸಂಕಷ್ಟವನ್ನು ತೆರಿಗೆ ಇಲಾಖೆ ಪರಿಹರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News