ಆರ್ ಬಿ ಐ ಹೊಸ ಮುಖ್ಯಸ್ಥರ ಶೈಕ್ಷಣಿಕ ಅರ್ಹತೆ ಬಗ್ಗೆ ಗುಜರಾತ್ ಹಿರಿಯ ಬಿಜೆಪಿ ನಾಯಕನ ಕುಹಕ

Update: 2018-12-12 18:43 GMT

ಹೊಸದಿಲ್ಲಿ,ಡಿ.12: ಗುಜರಾತ್ ಬಿಜೆಪಿ ನಾಯಕ ಜಯ್ ನಾರಾಯಣ ವ್ಯಾಸ್ ನೂತನವಾಗಿ ನೇಮಕಗೊಂಡಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ವಿದ್ಯಾರ್ಹತೆಯ ಕುರಿತು ಟ್ವಿಟರ್‌ನಲ್ಲಿ ಸರಣಿಯಾಗಿ ಟ್ವೀಟ್ ಮಾಡಿದ್ದಾರೆ.

ಗುಜರಾತ್‌ನಲ್ಲಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ವ್ಯಾಸ್ ಮಾಡಿರುವ ಟ್ವೀಟ್ ಆಡಳಿತ ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ನೂತನವಾಗಿ ನೇಮಕಗೊಂಡಿರುವ ಆರ್‌ಬಿಐ ಗವರ್ನರ್ ಅವರ ವಿದ್ಯಾರ್ಹತೆ ಇತಿಹಾಸದಲ್ಲಿ ಎಂ.ಎ ಯಾಗಿದೆ. ಅವರು ಆರ್‌ಬಿಐಯನ್ನೂ ಇತಿಹಾಸ ಮಾಡದಿರಲೆಂದು ಪ್ರಾರ್ಥಿಸುವ ಎಂದು ವ್ಯಾಸ್ ಟ್ವೀಟ್‌ನಲ್ಲಿ ಕುಟುಕಿದ್ದಾರೆ.

ವ್ಯಾಸ್ ಟ್ವೀಟ್‌ನಿಂದ ಆಡಳಿತ ಪಕ್ಷದ ಜೊತೆಗೆ ವಿರೋಧಿಗಳೂ ಗೊಂದಲಕ್ಕೀಡಾಗಿದ್ದಾರೆ. ಎಲ್ಲರೂ ವ್ಯಾಸ್ ಬಿಜೆಪಿ ತೊರೆದಿದ್ದಾರೆ ಎಂದೇ ಭಾವಿಸಿದ್ದರು. ಆದರೆ ಈ ಕುರಿತು ನಂತರ ಸ್ಪಷ್ಟನೆ ನೀಡಿದ ವ್ಯಾಸ್, ನಾನು ನೂತನ ಗವರ್ನರ್‌ಗೆ ಶುಭಾಶಯ ಕೋರಿದ್ದೇನೆ ಅಷ್ಟೇ. ನಾನು ಈಗಲೂ ಬಿಜೆಪಿಯಲ್ಲೇ ಇದ್ದೇನೆ ಎಂದು ತಿಳಿಸಿದ್ದಾರೆ ಎಂದು ಆಂಗ್ಲ ಸುದ್ದಿ ಮಾಧ್ಯಮ ವರದಿ ಮಾಡಿದೆ.

ತನ್ನ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರವಾಗುತ್ತದೆ ಎಂದು ತಿಳಿದಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದ ವ್ಯಾಸ್, ಆರ್‌ಬಿಐಯನ್ನು ನಿಬಾಯಿಸಲು ದೇಶೀಯ ಮತ್ತು ಅಂತರ್‌ರಾಷ್ಟ್ರೀಯ ಆರ್ಥಿಕತೆಯ ಜ್ಞಾನವಿರಬೇಕಾಗುತ್ತದೆ. ನಾನು ಐಎಎಸ್‌ಅನ್ನು ಗೌರವಿಸುತ್ತೇನೆ. ಸಮಸ್ಯೆಯೆಂದರೆ ಅವರು ಹಲವು ವಿಷಯಗಳ ಬಗ್ಗೆ ಕನಿಷ್ಟ ಜ್ಞಾನವನ್ನು ಹೊಂದಿರುತ್ತಾರೆ. ಹಿಂದಿನ ಗವರ್ನರ್‌ಗಳಿಗೆ ಅಂತರ್‌ರಾಷ್ಟ್ರೀಯ ಸಮುದಾಯದಲ್ಲಿದ್ದ ಸ್ವೀಕಾರಾರ್ಹತೆ ಈಗ ಇಲ್ಲ ಎಂದು ತಿಳಿಸಿದ್ದಾರೆ.

ಆರ್‌ಬಿಐಯನ್ನು ಮುನ್ನಡೆಸುವ ವ್ಯಕ್ತಿ ಓರ್ವ ಅರ್ಹ ಅರ್ಥಶಾಸ್ತ್ರಜ್ಞ ಆಗಿರಬೇಕು ಎನ್ನುವುದು ನನ್ನ ಅನಿಸಿಕೆ. ಅವರು ವ್ಯವಸ್ಥಾಪನೆಯಲ್ಲಿ ತರಬೇತಿ ಪಡೆದವರಾಗಿರುತ್ತಾರೆ. ಆರ್ಥಿಕತೆಯ ವ್ಯವಸ್ಥಾಪನೆಯನ್ನು, ಮುಖ್ಯವಾಗಿ ಅದು ಅತ್ಯಂತ ಸಂಕಷ್ಟಕರ ಸನ್ನಿವೇಶಗಳಲ್ಲಿ ಸಾಗುತ್ತಿರುವಾಗ, ಸಮರ್ಥ ಪ್ರತಿಭೆಗಳು ಮುನ್ನಡೆಸುವ ಅಗತ್ಯವಿದೆ ಎಂದು ವ್ಯಾಸ್ ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News