ಸಕಲ ಸೇನಾ ಗೌರವಗಳೊಂದಿಗೆ ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ ಅಂತ್ಯ ಸಂಸ್ಕಾರ
ಮಡಿಕೇರಿ, ಡಿ.13: ಭಾರತೀಯ ಸೇನಾ ಪಡೆಯಲ್ಲಿ ತಮ್ಮ ಉನ್ನತ ಸ್ತರದ ಕಾರ್ಯವೈಖರಿಗಳ ಮೂಲಕ ಅಚ್ಚಳಿಯದ ಛಾಪು ಮೂಡಿಸಿದ್ದ ಕೊಡಗಿನ ಹೆಮ್ಮೆಯ ಪುತ್ರ ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ ಅವರ ಅಂತ್ಯ ಸಂಸ್ಕಾರ ಸಕಲ ಸೇನಾ ಗೌರವಗಳೊಂದಿಗೆ ನಗರದಂಚಿನ ಅವರ ಸ್ವಗೃಹದ ಸಮೀಪದ ತೋಟದಲ್ಲಿ ನೆರವೇರಿತು.
ನಗರದ ಅಬ್ಬಿಫಾಲ್ಸ್ ರಸ್ತೆಯ ಬಳಿಯ ಹಸಿರ ಪರಿಸರದ ನಡುವೆ ಕಳೆದ ಮೂರು ದಶಕಗಳಿಂದ ತಮ್ಮ ನಿವೃತ್ತ ನೆಮ್ಮದಿಯ ಬದುಕು ಸಾಗಿಸಿದ್ದ ಲೆ.ಜ.ಬಿದ್ದಂಡ ಚಂಗಪ್ಪ ನಂದಾ(87) ಅವರು ಬುಧವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದರು. ಗುರುವಾರ ಅಪರಾಹ್ನ 3 ಗಂಟೆಯ ಬಳಿಕ ಸಕಲ ಸೇವಾ ಗೌರವಗಳಿಗೂ ಮುನ್ನ ಕುಟುಂಬಸ್ಥರಿಂದ ಅಂತಿಮ ವಿಧಿ ವಿಧಾನಗಳು ನೆರವೇರಿದವು. ಪತ್ನಿ ಲೀಲಾ ನಂದ ಹಾಗೂ ದ್ವಿತೀಯ ಪುತ್ರಿ ದೇವಿಕಾ ಅವರು ಕೊಡವ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.
ಮೂಲತಃ ಮಹರ್ ರೆಜಿಮೆಂಟಿನವರಾದ, ಹಾಲಿ ಮೈಸೂರಿನಲ್ಲಿ ಎನ್‍ಸಿಸಿ ಕಮಾಂಡೆಂಟ್ ಆಗಿರುವ ಕರ್ನಲ್ ಎಂ.ಕೆ. ಬೆಳ್ಯಪ್ಪ ಹಾಗೂ ಮೆಡ್ರಾಸ್ ಸ್ಯಾಪರ್ಸ್ ತಂಡದ ನೇತೃತ್ವ ವಹಿಸಿದ್ದ ಲೆ.ಕ. ದಿನೇಶ್ ಕುಮಾರ್ ನೇತೃತ್ವದ 21 ಮಂದಿಯ ತಂಡ ಅಗಲಿದ ಸೇನಾಧಿಕಾರಿ ಬಿ.ಸಿ. ನಂದ ಅವರಿಗೆ ಮೂರು ಸುತ್ತಿನ ಕುಶಾಲತೋಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿದರು.
ಈ ಸಂದರ್ಭ ನಂದಾ ಅವರ ಪಾರ್ಥಿವ ಶರೀರಕ್ಕೆ ಭಾರತೀಯ ಭೂ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಉತ್ತರ ವಲಯದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್, ದಕ್ಷಿಣ ವಲಯದ ಸೇನಾ ಮುಖ್ಯಸ್ಥ ಲೆ.ಜ. ಎ.ಕೆ. ಸೈನಿ, ತರಬೇತಿ ವಿಭಾಗದ ಮುಖ್ಯಸ್ಥ ಲೆ. ಜ. ಪಟ್ಟಚೆರುವಂಡ ತಿಮ್ಮಯ್ಯ ಹಾಗೂ ಮಹರ್ ರೆಜಿಮೆಂಟಿನ ಸಮಸ್ತ ಸೈನಿಕರು ಮತ್ತು ಅಧಿಕಾರಿಗಳ ಪರವಾಗಿ ಪುಷ್ಪಗುಚ್ಛವನ್ನು ಇರಿಸಿ ನಮನ ಸಲ್ಲಿಸಿದರು. ಬಳಿಕ ಪಾರ್ಥಿವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಬಿ.ಸಿ. ನಂದ ಅವರ ಪತ್ನಿ ಲೀಲಾ ನಂದ ಅವರಿಗೆ ಸೇನಾಧಿಕಾರಿ ಲೆ.ಕ. ದಿನೇಶ್ ಕುಮಾರ್ ಹಸ್ತಾಂತರಿಸಿದರು. ನಂತರ ಬಿ.ಸಿ.ನಂದ ಅವರ ಪಾರ್ಥಿವ ಶರೀರದ ಮೇಲಿದ್ದ ಅವರ ಮಹರ್ ರೆಜಿಮೆಂಟಿನ ‘ಕ್ಯಾಪ್’, ಪದಕಾವಳಿಗಳು ಹಾಗೂ ಕೊಡವ ಸಾಂಪ್ರದಾಯಿಕ ಪೀಚೆಕತ್ತಿಯನ್ನು ಅವರ ಸಮೀಪದ ಬಂಧುಗಳು ತೆಗೆದು ಕುಟುಂಬಸ್ಥರಿಗೆ ನೀಡಿದರು.
ಅಂತಿಮ ಸಂಸ್ಕಾರದ ವಿಧಿ ವಿಧಾನಗಳ ಸಂದರ್ಭ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ, ಸಂಚಾಲಕರಾದ ಮೇಜರ್ ಬಿ.ಎ.ನಂಜಪ್ಪ ಸೇರಿದಂತೆ ಕುಟುಂಬಸ್ಥರು ಹಾಗೂ ಬಂಧು ಬಳಗದವರು ಸಹಕರಿಸಿದರು.ಲೆ.ಜ. ಬಿ.ಸಿ.ನಂದ ಅವರ ಆಶಯದಂತೆ ಅವರ ಪಾರ್ಥಿವ ಶರೀರವನ್ನು ಮನೆಯ ಆವರಣದ ತೋಟದಲ್ಲಿ ಭೂ ತಾಯಿಯ ಮಡಿಲಿಗೆ ಅರ್ಪಿಸಲಾಯಿತು.
ಗೌರವ ಸಲ್ಲಿಕೆ
ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಮೀನಾ ಕಾರ್ಯಪ್ಪ, ಕಾರ್ಯಪ್ಪ ಅವರ ಸಹೋದರಿ ಸಹೋದರಿ ನಳಿನಿ ಕಾರ್ಯಪ್ಪ, ನಿವೃತ್ತ ಮೇ.ಜ. ಎಸ್.ಕೆ. ಕಾರ್ಯಪ್ಪ, ಮೇ.ಜ.ಕೆ.ಪಿ. ನಂಜಪ್ಪ, ಲೆ.ಕ. ಕೆ.ಜಿ. ಉತ್ತಯ್ಯ, ಬೆಟ್ಟಗೇರಿ ಸಮೂಹ ತೋಟಗಳ ಮಾಲಕರಾದ ಡಿ.ವಿನೋದ್ ಶಿವಪ್ಪ, ಮಾಜಿ ಸಚಿವ ಎಂ.ಸಿ.ನಾಣಯ್ಯ, ಎಂ.ಬಿ.ದೇವಯ್ಯ, ಐ.ಕೆ.ಅನಿಲ್, ಕೊಂಗಂಡ ಸುರೇಶ್, ಗ್ರಾಮ ವ್ಯಾಪ್ತಿಯ ನಿವಾಸಿಗಳು, ಸಾರ್ವಜನಿಕರು, ನಿವೃತ್ತ ಸೈನಿಕರು ಹಾಗೂ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.