“ಸದನದಲ್ಲಿ ರೈತರ ಸಮಸ್ಯೆ, ಅಭಿವೃದ್ಧಿಯ ವಿಷಯ ಬಿಟ್ಟು ಟಿಪ್ಪು ಜಯಂತಿ ವಿಷಯ ಎತ್ತಿದ್ದೀರಿ”

Update: 2018-12-13 14:01 GMT

ಬೆಳಗಾವಿ, ಡಿ.13: ಟಿಪ್ಪು ಜಯಂತಿ ಬಗ್ಗೆ ಸಮ್ಮಿಶ್ರ ಸರಕಾರ ಸ್ಪಷ್ಟ ಉತ್ತರ ಕೊಡದೆ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಮೂರು ಬಾರಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

'ಗುರುವಾರ ವಿಧಾನ ಪರಿಷತ್‍ನಲ್ಲಿ ಟಿಪ್ಪು ಜಯಂತಿ ಸಂಬಂಧ ಸರಕಾರದ ಸ್ಪಷ್ಟ ನಿಲುವನ್ನು ಮುಖ್ಯಮಂತ್ರಿ ಅವರಿಂದ ಕೊಡಿಸುವುದಾಗಿ ಸಭಾ ನಾಯಕಿ ಡಾ. ಜಯಮಾಲಾ ಬುಧವಾರ ತಿಳಿಸಿದ್ದು, ಇಂದು ನಿಯಮ 72ರಡಿ ಗಮನ ಸೆಳೆಯುವ ಸೂಚನೆಯಲ್ಲಿ ಟಿಪ್ಪು ಜಯಂತಿ ವಿಷಯ ಅಜೆಂಡಾದಿಂದ ಕೈಬಿಡಲಾಗಿದೆ. ಸಭಾನಾಯಕಿ ಮಾತನ್ನು ತಪ್ಪಿದ್ದಾರೆ. ಹೀಗಾಗಿ ಸರಕಾರದ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಟಿಪ್ಪು ಜಯಂತಿಯಿಂದ ಕೋಮುಸೌರ್ಹಾದತೆ ಹಾಳಾಗಿದೆ. ಟಿಪ್ಪು ಜಯಂತಿ ಮುಂದುವರಿಸುತ್ತೀರೋ, ಇಲ್ಲವೋ ? ಎಲ್ಲಾ ಅಜೆಂಡಾಕ್ಕೆ ಉತ್ತರ ನೀಡುತ್ತೀರಿ. ಟಿಪ್ಪು ವಿಚಾರ ಬಂದಾಗ ಫಲಾಯನ ಮಾಡುವುದೇಕೆ? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಬೈರೇಗೌಡ, ಸದನದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ, ರೈತರ ಸಮಸ್ಯೆಯ ವಿಷಯ ಬಿಟ್ಟು ಟಿಪ್ಪು ಜಯಂತಿ ವಿಷಯ ಎತ್ತಿದ್ದೀರಿ. ಮೂರು ರಾಜ್ಯದ ಫಲಿತಾಂಶ ಬಂದರೂ, ಬಿಜೆಪಿಗೆ ಅರಿವು ಬಂದಿಲ್ಲ ಎಂದು ದೂರಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು, ಸದನದ ಬಾವಿಗಿಳಿದು ಪ್ರತಿಭಟಿಸಿದರು. ಈ ವೇಳೆ ಸಭಾಪತಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಉತ್ತರಕ್ಕೆ ಸಮಯ ಕೊಡಿ: ಬಿಜೆಪಿ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಎಲ್ಲಾ ಬೇಡಿಕೆಗೆ ಸಕಾರಾತ್ಮಕವಾಗಿ ಸರಕಾರ ಸ್ಪಂದಿಸಿದೆ. ಮುಖ್ಯಮಂತ್ರಿಗಳು ಕೆಲಸದ ಒತ್ತಡದಲ್ಲಿದ್ದಾರೆ. ಉತ್ತರಿಸಲು ವಿಳಂಬವಾಗಿದೆ. ಉತ್ತರ ಕೊಡಿಸುವುದು ನನ್ನ ಜವಾಬ್ದಾರಿ. ರೈತರ ಮತ್ತು ಉ.ಕ. ಅಭಿವೃದ್ಧಿ ವಿಷಯಕ್ಕಿಂತ ಟಿಪ್ಪು ವಿಚಾರ ಮುಖ್ಯವೇ ? ಉತ್ತರ ನೀಡುತ್ತೇವೆ. ಸಮಯ ನೀಡಿ ಎಂದು ಸಚಿವ ಕೃಷ್ಣಬೈರೇಗೌಡ ಮನವಿ ಮಾಡಿದರು.

ಮಾತು ತಪ್ಪಿದ ಕಾಂಗ್ರೆಸ್: ಟಿಪ್ಪು ಜಯಂತಿ ಮುಂದುವರಿಸುತ್ತೀರಾ ಎಂಬ ಪ್ರಶ್ನೆಗೆ ಗುರುವಾರ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ತಿಳಿಸಿ ಕಾಂಗ್ರೆಸ್ ಮಾತು ತಪ್ಪಿದೆ. ರೈತರ ಹೆಸರು ಹೇಳಿ ಈ ವಿಷಯದಲ್ಲಿ ಜಾರಿಕೊಳ್ಳಲು ಕಾಂಗ್ರೆಸ್ ನೊಡುತ್ತಿದೆ. ಆಡಳಿತ ಪಕ್ಷ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಕ್ರೈಸ್ತ, ಕೊಡವರನ್ನು ಕೊಂದ ಟಿಪ್ಪು ಜಯಂತಿ ಅಗತ್ಯವೇ ? ಸರಕಾರದ ನಿರ್ಧಾರವೇನು ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು.

ಬಿಜೆಪಿ ಸದಸ್ಯರಿಗೆ ಅಪಹಾಸ್ಯ: ಟಿಪ್ಪು ಜಯಂತಿ ಆಚರಣೆ ಬಗ್ಗೆ ಸರಕಾರದ ನಿರ್ಧಾರ ತಿಳಿಸಬೇಕು ಎಂದು ಬಿಜೆಪಿ 4 ಬಾರಿ ಸದನದ ಬಾವಿಗಿಳಿದು ಪ್ರತಿಭಟಿಸಿತು. ಅಂತಿಮವಾಗಿ ಸಭಾಪತಿ ಆಡಳಿತ ಪಕ್ಷ ಉತ್ತರಿಸಲು ಸಮಯ ನೀಡಿ ಎಂದಿದಕ್ಕೆ ಪೀಠಕ್ಕೆ ಗೌರವ ಕೊಟ್ಟು ಬಿಜೆಪಿ ಸದಸ್ಯರು ತಮ್ಮ ಸ್ಥಾನದಲ್ಲಿ ಕುಳಿತುಕೊಂಡರು. ಈ ಸಮಯದಲ್ಲಿ ಕೆಲ ಕಾಂಗ್ರೆಸ್ ಸದಸ್ಯರು ಶೇಮ್.. ಶೇಮ್.. ಎಂದು ಬಿಜೆಪಿ ಸದಸ್ಯರಿಗೆ ಅಪಹಾಸ್ಯ ಮಾಡಿದ ಪ್ರಸಂಗ ನಡೆಯಿತು. ಇದರಿಂದ ಆಕ್ರೋಶಗೊಂಡ ಸದಸ್ಯರು ಸದನದ ಬಾವಿಗಿಳಿದು ಸರಕಾದ ವಿರುದ್ಧ ಘೋಷಣೆ ಕೂಗಿದರು. ಡಾ.ಜಯಮಾಲಾ ಕ್ಷಮೆಯಾಚಿಸಿ, ಡಿ.21ರವರೆಗೆ ಅವೇಶನ ನಡೆಯಲಿದೆ. ಆದ್ದರಿಂದ ಅಷ್ಟರೊಳಗೆ ಉತ್ತರ ನೀಡುತ್ತೇವೆ ಎಂದು ತಿಳಿಸಿ, ಬಿಜೆಪಿ ಸದಸ್ಯರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News