×
Ad

ಸದನದಲ್ಲಿ ಆಡಳಿತ ಪಕ್ಷದ ಸದಸ್ಯರ ಗೈರು: ಬಿಜೆಪಿ ಸಭಾತ್ಯಾಗ

Update: 2018-12-13 19:42 IST

ಬೆಳಗಾವಿ, ಡಿ.13: ಅಧಿವೇಶನ ನಡೆಸಲು ಸರ್ಕಾರಕ್ಕೆ ಆಸಕ್ತಿ ಇಲ್ಲ, ಸಚಿವರೂ ಇಲ್ಲ ಎಂದು ಆಕ್ಷೇಪಿಸಿ ಬಿಜೆಪಿ ಸಭಾತ್ಯಾಗ ಮಾಡಿದ ಘಟನೆ ವಿಧಾನಸಭೆಯಲ್ಲಿ ಜರುಗಿತು.

ಬರ ವಿಚಾರದ ಕುರಿತು ಬಿಜೆಪಿಯ ರಾಜೀವ್ ಮಾತನಾಡುತ್ತಿದ್ದಾಗ ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರ ಹಾಜರಾತಿ ಕಡಿಮೆ ಇರುವುದನ್ನು ಗಮನಿಸಿದ ಬಿಜೆಪಿಯ ಮತ್ತೊಬ್ಬ ಶಾಸಕ ಅರವಿಂದ ಲಿಂಬಾವಳಿ ಹಾಗೂ ಮತ್ತಿತರರು ಆಕ್ಷೇಪಿಸಿದರು. 'ಸದನದಲ್ಲಿ ಸಚಿವರೇ ಇಲ್ಲ. ಚರ್ಚೆ ಮಾಡುವುದಾದರೂ ಹೇಗೆ.  ಸರಕಾರಕ್ಕೆ ಸದನ ನಡೆಸುವ ಬಗ್ಗೆ ಗಂಭೀರತೆ ಇಲ್ಲ' ಎಂದು ಬಿಜೆಪಿಯವರು ದೂರಿದಾಗ ಜೆಡಿಎಸ್‍ನ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಬರದಂತಹ ಗಂಭೀರ ವಿಚಾರದ ಬಗ್ಗೆ ಚರ್ಚೆ ಮಾಡುವಾಗ ಸಚಿವರಿಲ್ಲ ಎಂದರೆ ಹೇಗೆ. ಸದನಕ್ಕೆ ಗಾಂಭೀರ್ಯ ಬೇಡವೇ ಎಂದು ಸಭಾತ್ಯಾಗ ಮಾಡಿದರು.

ಆ ಬಳಿಕ ವಿರೋಧ ಪಕ್ಷದವರು ಇಲ್ಲದಿದ್ದಾಗ ಸದನ ನಡೆಸುವುದು ಸೂಕ್ತವಲ್ಲ ಎಂದು ಜೆಡಿಎಸ್‍ನ ಎ.ಟಿ.ರಾಮಸ್ವಾಮಿ ಹೇಳಿದಾಗ ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರು, ಸದನದ ಕಾರ್ಯಕಲಾಪಗಳನ್ನು ಭೋಜನದ ವಿರಾಮದ ವೇಳೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News