ಹಳೆ ಪಿಂಚಣಿ ಯೋಜನೆ ಪರಿಶೀಲನೆಗೆ ಸಮಿತಿ ರಚನೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-12-13 15:59 GMT

ಬೆಳಗಾವಿ, ಡಿ.13: ಹಳೆ ಪಿಂಚಣಿ ಯೋಜನೆ ಬಗ್ಗೆ ಸಾಧಕ- ಬಾಧಕ ತಿಳಿಯಲು ಸಮಿತಿ ರಚಿಸಲಾಗಿದ್ದು, ಸಮಿತಿ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆ ಬೋಜೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 5.31 ಲಕ್ಷ ನೌಕರರಿದ್ದು, 2.06 ಲಕ್ಷ ನೌಕರರು ಹೊಸ ಪಿಂಚಣಿ ಯೋಜನೆ ಪಡೆಯುತ್ತಿದ್ದಾರೆ. ಹಳೆಯ ಪಿಂಚಣಿ ಯೋಜನೆ ಬೇಕೆಂದು ನೌಕರರು ಪ್ರತಿಭಟನೆ ಮಾಡುತ್ತಿದ್ದು, ಸರಕಾರ ಪ್ರತಿಭಟನಾಕಾರರ ಬೇಡಿಕೆಗೆ ಸಕಾರಾತ್ಮಕ ಸ್ಪಂದಿಸಿ ಸಮಿತಿ ರಚಿಸಲಾಗಿದೆ ಎಂದರು.

ಈ ವೇಳೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮಿತಿ ಎಷ್ಟು ದಿನದೊಳಗೆ ವರದಿ ನೀಡುತ್ತದೆ. ಯಾವಾಗ ಹಳೆ ಪಿಂಚಣಿ ಯೋಜನೆ ಜಾರಿ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಮುಖ್ಯಮಂತ್ರಿ, ಹೋರಾಟಗಾರರಲ್ಲಿನ ಒಬ್ಬರನ್ನು ಸಮಿತಿಗೆ ಸೇರಿಸಿಕೊಳ್ಳುವ ಚಿಂತನೆ ಇದ್ದು, ಶೀಘ್ರ ವರದಿ ನೀಡಲು ಸೂಚಿಸಿದ್ದೇನೆ. ವರದಿ ಬಂದ ನಂತರ ಸಾಧಕ-ಬಾಧಕ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ನಾವು ಬಂದು ಏಳೇ ತಿಂಗಳಾಯಿತು: ಹತ್ತಾರು ವರ್ಷಗಳ ಸಮಸ್ಯೆ ಬಗ್ಗೆ ಸದನದಲ್ಲಿ ಗಮನ ಸೆಳೆಯುತ್ತಿರುವುದು ಒಳ್ಳೆಯದೆ. ಆದರೆ, ನಾವು ಅಧಿಕಾರಕ್ಕೆ ಬಂದು ಕೇವಲ ಏಳು ತಿಂಗಳಾಗಿದೆ. ಪ್ರತಿಯೊಂದು ಸಮಸ್ಯೆ ಬಗ್ಗೆ ಸ್ಪಂದಿಸಿದ್ದೇವೆ. ಸರಕಾರದ ಖಜಾನೆಯಲ್ಲಿ ದುಡ್ಡು ಹಂಚಲು ಸಾಧಕ-ಬಾಧಕ ನೋಡಕೊಳ್ಳಬೇಕು. ನನಗೆ ಸಮಯ ಕೊಡಿ. ಎಲ್ಲಾ ಸಮಸ್ಯೆ ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News