ಬಿಬಿಎಂಪಿಗೂ ಬಂತು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ !

Update: 2018-12-13 16:36 GMT

ಬೆಂಗಳೂರು, ಡಿ.13: ಇದೇ ಮೊದಲ ಬಾರಿಗೆ ಬಿಬಿಎಂಪಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ರಚಿಸಲಾಗಿದೆ. ರಾಜ್ಯ ಸರಕಾರ ಮಂಡಳಿ ನಡೆಸುವಂತೆಯೇ ಪಾಲಿಕೆಯ ಮಂಡಳಿಯೂ ಕಾರ್ಯನಿರ್ವಹಿಸಲಿದೆ. ರಾಜ್ಯ ಸರಕಾರದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮಾದರಿಯಲ್ಲಿಯೇ, ಪಾಲಿಕೆಯಲ್ಲೂ ಮಂಡಳಿ ರಚನೆಯಾಗಿದ್ದು, ಪಾಲಿಕೆಯ ಪ್ರೌಢಶಾಲೆಗಳ ಎಲ್ಲ ಪ್ರಾಂಶುಪಾಲರು, ಶಿಕ್ಷಣಾಧಿಕಾರಿಗಳು, ಶಿಕ್ಷಣ ವಿಭಾಗದ ಅಧಿಕಾರಿಗಳು ಇರಲಿದ್ದಾರೆ.

ರಾಜ್ಯ ಪರೀಕ್ಷಾ ಮಂಡಳಿಯಿಂದ ಒಮ್ಮೆ ಮಾತ್ರ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಪಾಲಿಕೆಯಿಂದ ಮುಖ್ಯ ಪರೀಕ್ಷೆಯೊಳಗೆ ಎರಡು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಯೋಜನೆ ರೂಪಿಸಲಾಗಿದೆ. ಪರೀಕ್ಷೆಯನ್ನೂ ಸಹ ಸರಕಾರದ ಪರೀಕ್ಷಾ ಮಂಡಳಿ ನಡೆಸುವಂತಹ ರೀತಿಯಲ್ಲಿಯೇ ನಡೆಸಲು ತೀರ್ಮಾನಿಸಿದ್ದು, ಇದರಿಂದಾಗಿ ಮಕ್ಕಳಿಗೆ ಪರೀಕ್ಷೆಯ ಭಯ ಹೋಗಲಿದೆ.

ಬಿಬಿಎಂಪಿಯ 32 ಪ್ರೌಢ ಶಾಲೆಗಳಲ್ಲಿ ಸೋಮವಾರದಿಂದ ಮೊದಲ ಪೂರ್ವ ಸಿದ್ಧತಾ ಪರೀಕ್ಷ್ಷೆ ಆರಂಭವಾಗಲಿದೆ. ಅದರಂತೆ ಈಗಾಗಲೇ ಪ್ರತಿಯೊಂದು ವಿಷಯ ನಾಲ್ಕು ಪ್ರಶ್ನೆ ಪತ್ರಿಕೆಗಳು ಮಂಡಳಿಗೆ ಸಲ್ಲಿಕೆಯಾಗಿದ್ದು, ಆ ಪೈಕಿ ಒಂದು ಪ್ರಶ್ನೆ ಪತ್ರಿಕೆಯನ್ನು ಹಿರಿಯ ಅಧಿಕಾರಿಗಳು ಆಯ್ಕೆ ಮಾಡಿದ್ದಾರೆ. ಬಿಬಿಎಂಪಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಈಗಾಗಲೇ ಬಿಬಿಎಂಪಿ ರೋಶಿನಿ ಯೋಜನೆ ಜಾರಿ ಮಾಡಿದ್ದು, ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿ, ಉತ್ತಮ ಫಲಿತಾಂಶ ತರುವ ಶಾಲೆಗಳ ಶಿಕ್ಷಕರಿಗೆ ಪ್ರೋತ್ಸಾಹ ಧನ ನೀಡಲು ಬಿಬಿಎಂಪಿ ಚಿಂತಿಸಿದ್ದು, ಪರೀಕ್ಷಾ ಮಂಡಳಿ ರಚಿಸಿದೆ.

ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಶಾಲಾ-ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ, ಫಲಿತಾಂಶ ಪ್ರಮಾಣ ಮಾತ್ರ ಶೇ.70ರಷ್ಟು ದಾಟುತ್ತಿಲ್ಲ. ಉತ್ತಮ ಫಲಿತಾಂಶ ತರುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಪ್ರತ್ಯೇಕ ಮಂಡಳಿಯ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಫಲಿತಾಂಶ ನೀಡುವ ಸಲುವಾಗಿ ಪರೀಕ್ಷಾ ಮಂಡಳಿಯನ್ನು ರಚಿಸಲಾಗಿದೆ.

ಶಿಕ್ಷಕರಿಗೆ ಪ್ರೋತ್ಸಾಹ ಧನ: ಜತೆಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ಮಕ್ಕಳಿಗೆ ದೊರೆಯಬೇಕೆಂಬ ಉದ್ದೇಶದಿಂದ ಮೈಕ್ರೋಸಾಫ್ಟ್ ಹಾಗೂ ಟೆಕ್ ಅವಾಂತ್ ಗಾರ್ಡ್ ಸಂಸ್ಥೆಗಳ ಸಹಯೋಗದಲ್ಲಿ ಬಿಬಿಎಂಪಿ ರೋಶಿನಿ ಯೋಜನೆ ಜಾರಿಗೆ ತಂದಿದ್ದು, ಇದೀಗ ಉತ್ತಮ ಫಲಿತಾಂಶ ನೀಡುವ ಶಿಕ್ಷಕರಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಿದೆ.

ಶಾಲೆಗಳು ಪಡೆಯುವ ಫಲಿತಾಂಶದ ಆಧಾರದ ಮೇಲೆ ಶಿಕ್ಷಕರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅದರಂತೆ ಶೇ.60ರಿಂದ 70, 70 ರಿಂದ 80, 80 ರಿಂದ 90 ಹಾಗೂ 90 ರಂದ 100ರಷ್ಟು ಫಲಿತಾಂಶ ಪಡೆಯುವ ಶಾಲೆಗಳಿಗೆ ಒಂದೊಂದು ರೀತಿಯ ಪ್ರೋತ್ಸಾಹ ಧನ ಹಂಚಿಕೆ ಮಾಡಲಾಗುತ್ತದೆ. ಇದರಿಂದಾಗಿ ಶಾಲಾ-ಕಾಲೇಜುಗಳ ನಡುವೆ ಗುಣಾತ್ಮಕ ಪೈಪೋಟಿ ಏರ್ಪಡಲಿದ್ದು, ಶಿಕ್ಷಕರಲ್ಲಿಯೂ ಉತ್ಸಾಹ ಹೆಚ್ಚಾಗಲಿದೆ ಎನ್ನುತ್ತಾರೆ ಪಾಲಿಕೆಯ ಅಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News