ಸಕಾಲ ರ‍್ಯಾಂಕಿಂಗ್ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಶಿವಮೊಗ್ಗ ಜಿಲ್ಲಾಡಳಿತ

Update: 2018-12-13 17:38 GMT
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ

ಶಿವಮೊಗ್ಗ, ಡಿ. 13: ಕಳೆದ ನವೆಂಬರ್ ತಿಂಗಳ 5 ರಂದು ರಾಜ್ಯ ಸರ್ಕಾರ ಪ್ರಕಟಿಸಿದ 'ಸಕಾಲ' ರ‍್ಯಾಂಕಿಂಗ್ ಪಟ್ಟಿಯಲ್ಲಿ, ಶಿವಮೊಗ್ಗ ಜಿಲ್ಲೆ 24 ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ 'ಫಿನಿಕ್ಸ್ ಹಕ್ಕಿ'ಯ ರೀತಿಯಲ್ಲಿ ಮೇಲೆದ್ದಿರುವ ಶಿವಮೊಗ್ಗ ಜಿಲ್ಲಾಡಳಿತ, ಡಿ.12 ರಂದು ಪ್ರಕಟವಾದ 'ಸಕಾಲ' ರ‍್ಯಾಂಕಿಂಗ್ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಇಡೀ ರಾಜ್ಯದ ಗಮನ ತನ್ನತ್ತ ಸೆಳೆದುಕೊಂಡಿದೆ.

'ಆಗಸ್ಟ್-ಅಕ್ಟೋಬರ್ ನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ, ಲೋಕಸಭೆ ಉಪಚುನಾವಣೆ ನಡೆದಿತ್ತು. ಮಾದರಿ ನೀತಿ-ಸಂಹಿತೆ ಜಾರಿಯಲ್ಲಿದ್ದ ಕಾರಣದಿಂದ, ಕೆಲ ಇಲಾಖೆಗಳ ಕಾರ್ಯ ಯೋಜನೆಗಳು ತಟಸ್ಥವಾಗಿದ್ದವು. ಹಾಗೆಯೇ ಅಧಿಕಾರಿಗಳು ಚುನಾವಣಾ ಸಂಬಂಧಿತ ಕೆಲಸಕಾರ್ಯಗಳಲ್ಲಿ ತಲ್ಲೀನವಾಗಿದ್ದರು. ಈ ಕಾರಣದಿಂದ ಸಕಾಲ ಸೇವೆಯಲ್ಲಿ ಹಿಂದುಳಿಯುವಂತಾಗಿತ್ತು. ನವೆಂಬರ್ ನಲ್ಲಿ 22 ನೇ ಸ್ಥಾನಕ್ಕೆ ಜಿಲ್ಲೆ ಕುಸಿದಿದೆ ಎಂಬ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಡಿ.12 ರಂದು ಪ್ರಕಟವಾಗಿರುವ ಸಕಾಲ ರ‍್ಯಾಂಕಿಂಗ್ ನಲ್ಲಿ, ಶಿವಮೊಗ್ಗ ಜಿಲ್ಲೆಯು ಪ್ರಥಮ ಸ್ಥಾನ ಪಡೆದುಕೊಂಡಿದೆ. ಸಕಾಲ ಸೇವೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗಳಿಗೆ ತಾವು ಅಭಿನಂದನೆ ಸಲ್ಲಿಸುತ್ತೇನೆ' ಎಂದು ಜಿಲ್ಲಾಧಿಕಾರಿ ಡಾ. ಕೆ. ಎ. ದಯಾನಂದ್‍ರವರು ತಿಳಿಸಿದ್ದಾರೆ. 

'ಮುಂದಿನ ದಿನಗಳಳ್ಲಿ ಎಲ್ಲ ಇಲಾಖೆಯ ಸಿಬ್ಬಂದಿಗಳು ಸಹ ಇದೇ ರೀತಿಯ ಉತ್ತಮ ಕಾರ್ಯ ನಿರ್ವಹಿಸಿದಲ್ಲಿ, ಎಲ್ಲ ಸರ್ಕಾರಿ ಇಲಾಖೆ ಸೇವೆಗಳಲ್ಲಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲ ಸಿಬ್ಬಂದಿಗಳು ಶ್ರಮಿಸಬೇಕು' ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದ್ದಾರೆ. 

ರ‍್ಯಾಂಕಿಂಗ್ ವಿವರ: ಡಿ. 12 ರಂದು ರಾಜ್ಯ ಸರ್ಕಾರ ಪ್ರಕಟಿಸಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಉಡುಪಿ 2 ಸ್ಥಾನದಲ್ಲಿದೆ. ಉಳಿದಂತೆ ಚಿಕ್ಕಬಳ್ಳಾಪುರ 3, ಬೆಂಗಳೂರು ಗ್ರಾಮಾಂತರ 4, ಬಾಗಲಕೋಟೆ 5, ಚಿಕ್ಕಮಗಳೂರು 6, ರಾಯಚೂರು 7, ಚಾಮರಾಜನಗರ 8, ವಿಜಯಪುರ 9, ದಾವಣಗೆರೆ 10, ತುಮಕೂರು 11, ಉತ್ತರ ಕನ್ನಡ 12, ಮಂಡ್ಯ 13, ಹಾವೇರಿ 14, ಬಳ್ಳಾರಿ 15, ಗದಗ 16, ಹಾಸನ 17, ಯಾದಗಿರಿ 18, ರಾಮನಗರ 19, ಬೆಳಗಾವಿ 20, ಕಲ್ಬುರ್ಗಿ 21, ಮೈಸೂರು 22, ಚಿತ್ರದುರ್ಗ 23, ಧಾರವಾಡ 24, ಕೊಪ್ಪಳ 25, ಕೋಲಾರ 26, ದಕ್ಷಿಣ ಕನ್ನಡ 27, ಬೀದರ್ 28, ಕೊಡಗು 29 ಹಾಗೂ ಬೆಂಗಳೂರು ನಗರ ಜಿಲ್ಲೆಯು ಕಡೇಯ 30 ನೇ ಸ್ಥಾನದಲ್ಲಿದೆ. 

ಏನಿದು ರ‍್ಯಾಂಕಿಂಗ್?: ನಾಗರಿಕರಿಗೆ ಸಕಾಲದಲ್ಲಿ ಸರ್ಕಾರದ ಸೇವೆ ಲಭ್ಯವಾಗಬೇಕು, ನಿರ್ದಿಷ್ಟ ಅವಧಿಯಲ್ಲಿ ಅರ್ಜಿಗಳ ವಿಲೇವಾರಿಗೊಳಿಸುವ ಉದ್ದೇಶದಿಂದ ಕಳೆದ ಹಲವು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ 'ಸಕಾಲ ಯೋಜನೆ' ಜಾರಿಗೊಳಿಸಿದೆ. ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಹಲವು ಸೇವೆಗಳನ್ನು 'ಸಕಾಲ' ವ್ಯಾಪ್ತಿಯಡಿ ತರಲಾಗಿದೆ. ಸಕಾಲ ಯೋಜನೆಯಡಿ ನಾಗರಿಕರು ಅರ್ಜಿ ಸಲ್ಲಿಸಿದಾಗ, ಸರ್ಕಾರದ ನಿಗದಿಪಡಿಸಿದ ದಿನದೊಳಗೆ ಸಂಬಂಧಿಸಿ ಅಧಿಕಾರಿ-ನೌಕರರು ಅರ್ಜಿ ವಿಲೇಗೊಳಿಸಬೇಕು. ಒಂದು ವೇಳೆ ವಿಳಂಬ ಮಾಡಿದರೆ ದಂಡ ವಿಧಿಸಲಾಗುತ್ತದೆ.

ಅರ್ಜಿ ಸ್ವೀಕೃತಿ ಮತ್ತು ನಿಗದಿತ ಸಮಯದೊಳಗಿನ ವಿಲೇವಾರಿ ಅಂಶದ ಆಧಾರದ ಮೇಲೆ, ಜಿಲ್ಲಾವಾರು ರ‍್ಯಾಂಕಿಂಗ್ ಪಟ್ಟಿಯನ್ನು ಸರ್ಕಾರ ನಿಯಮಿತವಾಗಿ ಬಿಡುಗಡೆ ಮಾಡುತ್ತದೆ. ಪ್ರಸ್ತುತ ರಾಜ್ಯದಲ್ಲಿ 73 ಇಲಾಖೆ-ಸಂಸ್ಥೆಗಳ 852 ಸೇವೆಗಳನ್ನು ಸಕಾಲ ವ್ಯಾಪ್ತಿಯಡಿ ನೀಡಲಾಗುತ್ತಿದೆ. ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ 473 ಸೇವೆಗಳನ್ನು ಸಕಾಲ ವ್ಯಾಪ್ತಿಯಲ್ಲಿ ನೀಡಲಾಗುತ್ತಿದೆ. 

ಡಿಸಿ ಪರಿಶ್ರಮ: ಕಳೆದ ಕೆಲ ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯು, 'ಸಕಾಲ ರ‍್ಯಾಂಕಿಂಗ್'ನಲ್ಲಿ ಹಿನ್ನಡೆಯಲ್ಲಿತ್ತು. ಡಾ.ಎಂ. ಲೋಕೇಶ್ ಡಿಸಿ ಹಾಗೂ ಕೆ. ಚೆನ್ನಬಸಪ್ಪ ಎಡಿಸಿ ಯಾಗಿದ್ದ ವೇಳೆ, ರ‍್ಯಾಂಕಿಂಗ್‍ನಲ್ಲಿ ಒಮ್ಮೆ ಮೊದಲ ಸ್ಥಾನ ಪಡೆದುಕೊಂಡಿತ್ತು. ಆದರೆ ಜಿಲ್ಲೆಯಲ್ಲಿ ನಿರಂತರವಾಗಿ ಎದುರಾದ ಚುನಾವಣೆಗಳು ಆಡಳಿತದ ಮೇಲೆ ಪರಿಣಾಮ ಬೀರಿತ್ತು. ಸಿಬ್ಬಂದಿಗಳು ಚುನಾವಣೆಯಲ್ಲಿಯೇ ಹೆಚ್ಚು ತಲ್ಲೀನವಾಗುವಂತಾಗಿತ್ತು. 

ನೀತಿ-ಸಂಹಿತೆ ಕಾರಣದಿಂದ ಸಕಾಲ ವ್ಯಾಪ್ತಿಯ ಹಲವು ಸೇವೆ ನಾಗರಿಕರಿಗೆ ಲಭ್ಯವಾಗದಂತಾಗಿತ್ತು. ಇದರಿಂದ ಸಕಾಲ ರ‍್ಯಾಂಕಿಂಗ್‍ನಲ್ಲಿ ಜಿಲ್ಲೆಗೆ ಹಿನ್ನಡೆಯಾಗಿತ್ತು. ಆದರೆ 'ಜನಸ್ನೇಹಿ' ಐಎಎಸ್ ಅಧಿಕಾರಿ ಖ್ಯಾತಿಯ ಡಾ.ಕೆ.ಎ ದಯಾನಂದ್‍ರವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದರು. ಕಾಲಮಿತಿಯಲ್ಲಿ ಕಡತಗಳ ವಿಲೇವಾರಿಗೆ ಕ್ರಮಕೈಗೊಂಡಿದ್ದರು. ಕೆಲಸ ಮಾಡುವುದನ್ನೇ ಮರೆತ್ತಿದ್ದ ಅಧಿಕಾರಿಗಳ ಮೈಚಳಿ ಬಿಡಿಸಿದ್ದರು. ತಾಲೂಕು ಆಡಳಿತಗಳಿಗೂ ಚಾಟಿ ಬೀಸಿದ್ದರು. 

ಹಾಗೆಯೇ ಯುವ ಕೆ.ಎ.ಎಸ್. ಅಧಿಕಾರಿ ಎಡಿಸಿ ಜಿ.ಅನುರಾಧಾರವರು ಕೂಡ, ಸಕಾಲ ವ್ಯಾಪ್ತಿಯಡಿ ಕಾಲಮಿತಿಯಲ್ಲಿ ಕಡತ ವಿಲೇವಾರಿಯತ್ತ ಗಮನಹರಿಸಿದ್ದರು. ಒಟ್ಟಾರೆ ಜಿಲ್ಲಾಡಳಿತದ ಪರಿಶ್ರಮದಿಂದ ಶಿವಮೊಗ್ಗ ಜಿಲ್ಲೆಯು ಸಕಾಲ ರ‍್ಯಾಂಕಿಂಗ್‍ನಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಶ್ಲಾಘನೀಯ ಸಂಗತಿ. 

ನಾಗರಿಕರಿಗೆ ತೊಂದರೆಯಾಗಬಾರದು : ಡಿ.ಸಿ. ಡಾ.ಕೆ.ಎ.ದಯಾನಂದ್
ನಾಗರೀಕರಿಗೆ ಕಾಲಮಿತಿಯಲ್ಲಿ ಸರ್ಕಾರದ ಸೇವೆಗಳು ಲಭ್ಯವಾಗಬೇಕು. ಕಚೇರಿಗಳಿಗೆ ಅವರು ಅಲೆದಾಡುವಂತಾಗಬಾರದು. ಕಡತಗಳ ವಿಲೇವಾರಿಯಲ್ಲಿ ವಿಳಂಬ ಮಾಡದಂತೆ ಎಲ್ಲ ಇಲಾಖೆ, ತಾಲೂಕು ಆಡಳಿತಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹಾಗೆಯೇ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಜನರಿದ್ದ ಸ್ಥಳಕ್ಕೆ ಆಡಳಿತ ಕೊಂಡೊಯ್ಯುವ ಕಾರ್ಯ ಕೂಡ ನಡೆಸಲಾಗುತ್ತಿದೆ. ಇದೆಲ್ಲದರ ಫಲವಾಗಿ ಸಕಾಲ ರ‍್ಯಾಂಕಿಂಗ್‍ನಲ್ಲಿ ಉತ್ತಮ ಸಾಧನೆ ಮಾಡುವಂತಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎ.ದಯಾನಂದ್‍ರವರು ತಿಳಿಸುತ್ತಾರೆ. 

ಕಡತ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ: ಎಡಿಸಿ ಜಿ.ಅನುರಾಧ
ಕಾಲಮಿತಿಯಲ್ಲಿ ಕಡತ ವಿಲೇವಾರಿಗೆ ಕ್ರಮಕೈಗೊಳ್ಳಲಾಗಿದೆ. ವಿನಾಕಾರಣ ಕಡತ ವಿಲೇ ಬಾಕಿ ಉಳಿಸಿಕೊಳ್ಳುವವರ ವಿರುದ್ದ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾಡಳಿತದ ಈ ಎಲ್ಲ ಪ್ರಯತ್ನದ ಫಲವಾಗಿ, ಡಿ.12 ರಂದು ಪ್ರಕಟವಾಗಿರುವ ಸಕಾಲ ರ‍್ಯಾಂಕಿಂಗ್‍ನಲ್ಲಿ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕಾರಣಕರ್ತರಾದ ಎಲ್ಲ ಅಧಿಕಾರಿ-ಸಿಬ್ಬಂದಿಗಳಿಗೂ ತಾವು ಅಭಿನಂದನೆ ಸಲ್ಲಿಸುತ್ತೆನೆ. ಮುಂದಿನ ದಿನಗಳಲ್ಲಿಯೂ ನಾಗರಿಕ ಸೇವೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿರುವ ರೀತಿಯಲ್ಲಿ ಸಿಬ್ಬಂದಿಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧರವರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತದ ಸಾಧನೆ ಮುಂದುವರಿಯಲಿ : ಜಿಲ್ಲಾಧ್ಯಕ್ಷ ಎಸ್.ಹೆಚ್.ಬಾಲಾಜಿ 
ಈ ಹಿಂದೆ ಸಕಾಲ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕೆಳಮಟ್ಟದಲ್ಲಿದ್ದ ಶಿವಮೊಗ್ಗ ಜಿಲ್ಲಾಡಳಿತವು, ಪ್ರಸ್ತುತ ಉತ್ತಮ ಸಾಧನೆ ಮಾಡಿರುವುದು ಅಭಿನಂದನೀಯ ಕಾರ್ಯವಾಗಿದೆ. ಇದಕ್ಕೆ ಕಾರಣಕರ್ತರಾದ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೂ ತಮ್ಮ ಸಂಘಟನೆಯ ವತಿಯಿಂದ ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಜಿಲ್ಲಾಡಳಿತ ನಾಗರಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಇಡೀ ರಾಜ್ಯಕ್ಕೆ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಎನ್‍ಎಸ್‍ಯುಐ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಹೆಚ್.ಬಾಲಾಜಿ ತಿಳಿಸಿದ್ದಾರೆ.

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News