×
Ad

ಶಿವಮೊಗ್ಗ: ಕರ್ತವ್ಯ ಲೋಪ, ಹಣ ದುರ್ಬಳಕೆ ಆರೋಪ; ಕೊಣಂದೂರು ಗ್ರಾ.ಪಂ. ಪಿಡಿಓ ಅಮಾನತು

Update: 2018-12-13 23:12 IST

ಶಿವಮೊಗ್ಗ, ಡಿ.13: ಕರ್ತವ್ಯ ಲೋಪ ಹಾಗೂ ಹಣ ದುರ್ಬಳಕೆ ಆರೋಪದ ಮೇರೆಗೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕೊಣಂದೂರು ಗ್ರಾಮ ಪಂಚಾಯತ್ ಪಿಡಿಓ ಕೆ.ಎಸ್.ಕುಮಾರ್ ಎಂಬವರನ್ನು ಅಮಾನತುಗೊಳಿಸಿ ಜಿಲ್ಲಾ ಪಂ. ಮುಖ್ಯ ಕಾರ್ಯನಿರ್ವಹಣಾದಿಕಾರಿ (ಸಿಇಓ) ಕೆ.ಶಿವರಾಮೇಗೌಡ ಆದೇಶ ಹೊರಡಿಸಿದ್ದಾರೆ. 

ಆರೋಪಿತ ಪಿಡಿಓ, ಸರ್ಕಾರದ ವಿವಿಧ ಯೋಜನೆಗಳಲ್ಲಿ ಹಣ ದುರುಪಯೋಗ ಪಡಿಸಿಕೊಂಡಿರುವ ಕುರಿತು ಮುಖ್ಯ ಲೆಕ್ಕಾಧಿಕಾರಿಗಳು ವರದಿ ನೀಡಿದ್ದರು. ಇದರ ಆಧಾರದ ಮೇಲೆ ಕೆ.ಸಿ.ಎಸ್. (ಸಿಸಿಎ) ನಿಯಮ 10 ರಡಿಯಲ್ಲಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಸೇವೆಯಿಂದ ಅಮಾನತಿನಲ್ಲಿರಿಸಿ ಸಿಇಓ ಆದೇಶಿಸಿದ್ದಾರೆ. 

ದುರ್ಬಳಕೆ: ಅಮಾನತುಗೊಂಡ ಪಿಡಿಓ, ವರ್ಗಾವಣೆಗೊಂಡಿದ್ದ ಪಿಡಿಓ ಸಹಿಯನ್ನು ಪೋರ್ಜರಿ ಮಾಡಿ ಬಹಳಷ್ಟು ಬಿಲ್‍ಗಳನ್ನು ಡ್ರಾ ಮಾಡಿದ್ದರು. ಮನೆ ಕಂದಾಯ, ನೀರಿನ ಕಂದಾಯದ ಹಣವನ್ನು ಬ್ಯಾಂಕ್‍ಗೆ ಜಮೆ ಮಾಡಿರಲಿಲ್ಲ. ಖಾತೆ ಬದಲಾವಣೆ, ನರೆಗಾ ಯೋಜನೆಯಡಿ ಫಲಾನುಭವಿಗಳಿಗೆ ನೀಡಬೇಕಾಗಿರುವ ಲಕ್ಷಾಂತರ ಹಣವನ್ನು ಸಹ ಪಾವತಿಸದೆ ದುರುಪಯೋಗ ಪಡಿಸಿಕೊಂಡಿರುವುದು ತನಿಖೆ ವೇಳೆ ಕಂಡುಬಂದಿತ್ತು ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ಶಿಸ್ತು ಕ್ರಮವಾಗಿ ಆರೋಪಿತ ಪಿಡಿಓ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಿ ಸಿಇಓ ಆದೇಶಿಸಿದ್ದಾರೆ. ಅಮಾನತುಗೊಂಡ ಪಿಡಿಓ, ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲವೆಂದು ಸಿಇಓ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News