ಶಿವಮೊಗ್ಗ: ಮೂರು ದಿನಗಳಿಂದ ನಡೆಯುತ್ತಿದ್ದ ಅತಿಥಿ ಉಪನ್ಯಾಸಕರ ಧರಣಿ ಅಂತ್ಯ

Update: 2018-12-13 17:54 GMT

ಶಿವಮೊಗ್ಗ, ಡಿ. 13: ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸೇವಾ ಭದ್ರತೆ ಕಲ್ಪಿಸುವುದು ಸೇರಿದಂತೆ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ, ರಾಜ್ಯ ಸಮನ್ವಯ ಸಮಿತಿಯು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಗುರುವಾರ ಅಂತ್ಯಗೊಳಿಸಿದೆ. 

ಗುರುವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಡಾ.ಕೆ.ಎ. ದಯಾನಂದ್‍ರವರ ಮೂಲಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಿಗೆ ಸಮಿತಿಯು ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಅರ್ಪಿಸಿತು. ನಂತರ ಜಿಲ್ಲಾಧಿಕಾರಿಗಳು ಮಾತನಾಡಿ, ಕಾಲಮಿತಿಯಲ್ಲಿ ಈ ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು. ನಂತರ ಉಪನ್ಯಾಸಕರು ಧರಣಿ ಕೈಬಿಡುವ ನಿರ್ಧಾರ ಪ್ರಕಟಿಸಿದರು. 

ಬೇಡಿಕೆಗಳು: ಪ್ರಸ್ತುತ ನಡೆಯುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸೇವೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಬೇಕು. ಉಪನ್ಯಾಸಕರ ಸೇವೆಗೆ ವಿಶೇಷ ನಿಯಮಾವಳಿ ರಚನೆ ಮಾಡಲು ಸರ್ಕಾರವೇ ಶಿಫಾರಸ್ಸು ಮಾಡಿರುವ ಕಡತವನ್ನು ಬೆಳಗಾವಿ ಅಧಿವೇಶನದಲ್ಲಿ ಸಚಿವ ಸಂಪುಟ ಸಮಿತಿಯ ಮುಂದೆ ಮಂಡಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಎಂದು ಸಮಿತಿಯು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ. 

ಇತರೆ ರಾಜ್ಯಗಳ ಮಾದರಿಯಲ್ಲಿ, ಅತಿಥಿ ಉಪನ್ಯಾಸಕರ ಸೇವೆ ವಿಲೀನಗೊಳಿಸಿ ಸೇವಾ ಭದ್ರತೆ ನೀಡಬೇಕು. ಕಾಯಂ ಉಪನ್ಯಾಸಕರಿಗೆ ನೀಡಲಾಗುವ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಬೇಕು. ಈ ಮೂಲಕ ಅತಿಥಿ ಉಪನ್ಯಾಸಕರು ನೆಮ್ಮದಿಯುತವಾಗಿ ಜೀವನ ನಡೆಸುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಸಮಿತಿ ಮನವಿ ಮಾಡಿದೆ. 

ಕಳೆದ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರು ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಕನಿಷ್ಠ ವೇತನದಲ್ಲಿ ಜೀವನ ನಡೆಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು ಎಂದು ಸಮಿತಿ ಒತ್ತಾಯಿಸಿದೆ. ಪ್ರತಿಭಟನೆಯಲ್ಲಿ ಸಮಿತಿಯ ಪ್ರಮುಖರಾದ ಡಾ. ಎಚ್. ಸೋಮಶೇಖರ್ ಶಿವಮೊಗ್ಗಿ, ನರಹರಿ, ಆರ್.ಬಿ.ಅರುಣ್‍ ಕುಮಾರ್, ರಾಜೇಶ್‍ ಕುಮಾರ್, ಧನಂಜಯ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News