ತರೀಕೆರೆ: ಮಂಗಳಮುಖಿಯಿಂದ ಕಾಲನಿ ನಿವಾಸಿಗಳಿಗೆ ಕಿರುಕುಳ; ಗಡಿಪಾರಿಗೆ ಒತ್ತಾಯಿಸಿ ಎಸ್ಪಿಗೆ ದಸಂಸ ದೂರು

Update: 2018-12-13 18:29 GMT

ಚಿಕ್ಕಮಗಳೂರು, ಡಿ.13: ಸದಾ ಕಲಹಗಳನ್ನು ಸೃಷ್ಟಿಸುತ್ತಾ ತನ್ನ ದುರ್ವರ್ತನೆಯಿಂದ ಊರಿನ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡುತ್ತಿರುವ ವ್ಯಕ್ತಿಯನ್ನು ತರೀಕೆರೆಯಿಂದ ಗಡಿಪಾರು ಮಾಡುವಂತೆ ತರೀಕೆರೆ ಬಾಪೂಜಿ ಕಾಲನಿಯ ನಿವಾಸಿಗಳು ಜಿಲ್ಲಾ ಪೋಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರ ನೇತೃತ್ವದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರನ್ನು ಭೇಟಿ ಮಾಡಿದ ಕಾಲನಿಯ ನಿವಾಸಿಗಳು ಎಸ್ಪಿಗೆ ಈ ಸಂಬಂಧ ಮನವಿ ಸಲ್ಲಿಸಿದರು.

ತಮ್ಮ ಕಾಲನಿಯಲ್ಲಿ ತಿಪ್ಪೇಶ ಆಲಿಯಾಸ್ ಅರುಂಧತಿ ಎಂಬ ಮಂಗಳಮುಖಿಯೋರ್ವರು ಕಳೆದ 2 ವರ್ಷಗಳಿಂದ ಸದಾ ಒಂದಿಲ್ಲೊಂದು ಕಲಹಗಳನ್ನು ಸೃಷ್ಟಿಸುತ್ತಾ ಗ್ರಾಮದ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಸಮಾಜದ ಮುಖಂಡರ ಮೇಲೆ ಇಲ್ಲಸಲ್ಲದ ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ. ನಾನು ಮಂಗಳಮುಖಿಯಾಗಿರುವುದರಿಂದ ನಾನು ಏನು ಮಾಡಿದರೂ ಯಾರೂ ನನ್ನನ್ನು ಕೇಳುವುದಿಲ್ಲ, ಕಾನೂನು ನನ್ನ ಪರವಾಗಿದೆ, ನಿಮ್ಮನ್ನು ಸುಟ್ಟುಬಿಡುತ್ತೇನೆ ಎಂದು ಹೆದರಿಸುವ ಆತ ರಾತ್ರಿ ವೇಳೆ ಚೌಡಿ, ದುರ್ಗಿ ಮತ್ತು ಮೋಹಿನಿ ವೇಷಗಳನ್ನು ಧರಿಸಿಕೊಂಡು ಕೇರಿ ಕೇರಿಗಳಲ್ಲಿ ಸುತ್ತುತ್ತಾ ಮನೆಗಳ ಮೇಲೆ ವಿಭೂತಿ ಎಸೆಯುತ್ತಿದ್ದಾನೆ. ತ್ರಿಶೂಲ ಹಿಡಿದು ಪ್ರಾಣಭಯ ಮೂಡಿಸುತ್ತಿದ್ದಾನೆ ಎಂದು ಈ ವೇಳೆ ದಸಂಸ ಮುಖಂಡರೊಂದಿಗಿದ್ದ ಕಾಲನಿ ನಿವಾಸಿಗಳು ಆರೋಪಿಸಿದರು.

ರಾತ್ರಿ ವೇಳೆ ಅಮಾಯಕರನ್ನು ಕರೆದು ಕಾಲಿಗೆ ಬೀಳಿಸಿಕೊಳ್ಳುವುದು, ಅವರ ಮೇಲೆ ದೌರ್ಜನ್ಯವೆಸಗುವುದು ಮಾಡುತ್ತಿರುವ ಆತ ಗ್ರಾಮ ದೇವತೆ ಅಂತರ ಘಟ್ಟಮ್ಮನವರ ದೇವಸ್ಥಾನಕ್ಕೆ ಬೀಗಹಾಕಿ ಕೀಯನ್ನು ಇಟ್ಟುಕೊಂಡಿದ್ದಾರೆ. ಇದರಿಂದಾಗಿ ದೇವಾಲಯದಲ್ಲಿ ಕಳೆದ 5 ದಿನಗಳಿಂದ ದಿನನಿತ್ಯದ ಪೂಜೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಎಸ್ಪಿ ಬಳಿ ಅಳಲು ತೋಡಿಕೊಂಡರು.

ಮೊಬೈಲ್‍ನಲ್ಲಿ ದಾಖಲಿಸಿದ್ದ ಮಂಗಳಮುಖಿಯದ್ದು ಎನ್ನಲಾದ ನಡವಳಿಕೆಗಳ ವಿಡಿಯೊ ದೃಶ್ಯಾವಳಿಗಳನ್ನು ಪೊಲೀಸ್ ವರಿಷ್ಠಾಧಿಕಾರಿಮುಖ್ಯಾಧಿಕಾರಿ ಹರೀಶ್ ಪಾಂಡೆಗೆ ತೋರಿಸಿದ ನಿವಾಸಿಗಳು ತಕ್ಷಣ ಆತನನ್ನು ತರೀಕೆರೆಯಿಂದ ಗಡಿಪಾರು ಮಾಡುವ ಮೂಲಕ ಕಾಲನಿಯ ಜನರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಮನವಿಗೆ ಪ್ರತಿಕ್ರಿಯಿಸಿದ ಎಸ್ಪಿ ಹರೀಶ್ ಪಾಂಡೆ ಈಗಾಗಲೇ ಅತನ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಆತನ ಗಡಿಪಾರಿಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಸಂಘಟನಾ ಸಂಚಾಲಕ ಮಹೇಂದ್ರ ಸ್ವಾಮಿ, ಖಂಡಪ್ಪ, ಖಜಾಂಚಿ ಅರ್.ಶೇಖರ್, ತರೀಕೆರೆ ತಾಲೂಕು ಸಂಚಾಲಕ ಅಣ್ಣಪ್ಪ, ಕಡೂರು ಸಂಚಾಲಕ ಲಕ್ಷ್ಮಣ್, ನಿವಾಸಿಗಳಾದ ಟಿ.ಎಚ್.ಶ್ರೀನಿವಾಸ್, ವೇಣು, ಸಚಿನ್, ಗೌರಮ್ಮ, ಕುಮಾರ್, ಟಿ.ಲೋಕೇಶ್, ಶೋಭಾ, ಪದ್ಮಾ, ರತ್ನಮ್ಮ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News