ಆರ್‌ಬಿಐ: ಬಾಣಲೆಯಿಂದ ಬೆಂಕಿಗೆ

Update: 2018-12-14 04:26 GMT

ಚಹಾ ಮಾಡುವಾತನೊಬ್ಬ ದೇಶದ ಪ್ರಧಾನಿಯಾಗಬಹುದು. ಅದು ಪ್ರಜಾಸತ್ತೆಯ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ. ಇದೇ ಸಂದರ್ಭದಲ್ಲಿ ಅದೇ ಪ್ರಧಾನಿ ಟಿವಿ ಧಾರಾವಾಹಿಯ ನಟಿಯೊಬ್ಬಳನ್ನು ಮಾನವ ಸಂಪನ್ಮೂಲ ಸಚಿವೆಯನ್ನಾಗಿಸಿ, ಆಕೆಗೆ ವಿಶ್ವವಿದ್ಯಾನಿಲಯಗಳ ಉಸ್ತುವಾರಿಯನ್ನು ನೀಡುವುದಾದರೆ ಅಥವಾ ಇತಿಹಾಸದಲ್ಲಿ ಎಂಎ ಮಾಡಿದ ವ್ಯಕ್ತಿಯನ್ನು ಆರ್‌ಬಿಐ ಗವರ್ನರ್ ಆಗಿ ತಂದು ಕೂರಿಸಿದರೆ ಪ್ರಜಾಸತ್ತೆ ಗೆದ್ದು ಸೋತಂತೆ. ಪ್ರಧಾನಿಯಾದವನು ಉನ್ನತ ಶಿಕ್ಷಣ ಪಡೆಯದೇ ಇರಬಹುದು, ಆದರೆ ಆತನಿಗೆ ತನ್ನ ಸುತ್ತಮುತ್ತ ಆಯಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಪರಿಣತರನ್ನು ಇಟ್ಟುಕೊಳ್ಳುವ ಅವಕಾಶವಿದೆ. ಅವರ ಮೂಲಕ ದೇಶವನ್ನು ಮುನ್ನಡೆಸಬಹುದು.

ಆದರೆ ಆತ ತನ್ನ ಸುತ್ತ ಮುತ್ತ ವ್ಯಾಪಾರಿಗಳನ್ನು ಇಟ್ಟುಕೊಂಡು ಅವರ ಸಲಹೆಯಂತೆ ದೇಶವನ್ನು ಮುನ್ನಡೆಸತೊಡಗಿದರೆ ಏನಾಗಬಹುದು? ಉತ್ತರ ನಮ್ಮ ಮುಂದಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ನೂತನ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಆಯ್ಕೆಯಾಗಿದ್ದಾರೆ. ಈ ಹಿಂದೆ ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞರು, ಅರ್ಥಶಾಸ್ತ್ರದಲ್ಲಿ ವಿವಿಧ ಸಂಶೋಧನೆಗಳನ್ನು ಮಾಡಿ ಖ್ಯಾತಿವೆತ್ತವರು ಅಲಂಕರಿಸಿದ ಸ್ಥಾನವನ್ನು ಇದೀಗ ಇತಿಹಾಸದಲ್ಲಿ ಎಂಎ ಮಾಡಿದ, ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿರುವ ವ್ಯಕ್ತಿಯೊಬ್ಬ ವಹಿಸಿಕೊಳ್ಳಲು ಹೊರಟಿದ್ದಾರೆ. ಆರ್‌ಬಿಐಯ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಎಂಬಂತಾಗಿದೆ.

ರಘುರಾಮ ರಾಜನ್‌ರಂತಹ ಶ್ರೇಷ್ಠ ಆರ್ಥಿಕ ಚಿಂತಕನ ಸ್ಥಾನದಲ್ಲಿ ಊರ್ಜಿತ್ ಪಟೇಲ್ ಅವರನ್ನು ತಂದು ಕೂರಿಸಿದಾಗಲೇ ಆರ್‌ಬಿಐಯೊಳಗೆ ತಲ್ಲಣ ಆರಂಭವಾಗಿತ್ತು. ಅವರನ್ನು ಆರ್‌ಬಿಐಗೆ ತಂದ ಕೆಲವೇ ತಿಂಗಳಲ್ಲಿ ಕೇಂದ್ರ ಸರಕಾರ ನೋಟು ನಿಷೇಧವನ್ನು ಘೋಷಿಸಿತು. ಈ ನಿರ್ಧಾರಕ್ಕೂ ಆರ್‌ಬಿಐಗೂ ಯಾವುದೇ ಸಂಬಂಧವಿರಲಿಲ್ಲ ಎನ್ನುವುದೇ ಅತ್ಯಂತ ಆತಂಕಕಾರಿ ವಿಷಯವಾಗಿತ್ತು. ನೋಟು ನಿಷೇಧ ಸಂಪೂರ್ಣ ವಿಫಲವಾಗಲು ಇದು ಪ್ರಮುಖ ಕಾರಣವಾಗಿತ್ತು. ಕೆಲವೇ ಕೆಲವರ ಹಿತಾಸಕ್ತಿಯನ್ನು ರಕ್ಷಿಸುವುದಕ್ಕಾಗಿ ನೋಟು ನಿಷೇಧವನ್ನು ಮಾಡಲಾಗಿತ್ತು. ಕೆಲವು ಕಾರ್ಪೊರೇಟ್ ಸಂಸ್ಥೆಗಳು ಮತ್ತು ರಾಜಕೀಯ ಸಂಘಟನೆಗಳು ನೋಟು ನಿಷೇಧದ ಭಾರೀ ಫಲಾನುಭವಿಗಳಾದರು. ಜನಸಾಮಾನ್ಯರು ಕಂಗೆಟ್ಟರು. ದೇಶದ ಆರ್ಥಿಕತೆ ನೆಲಕಚ್ಚಿತು. ತಾವು ಹೇಳಿದಂತೆ ಕುಣಿಯುವ, ತಮ್ಮ ಮಾತಿಗೆ ಎದುರಾಡದ ಒಂದು ಕೈಗೊಂಬೆಯಾಗಿ ಊರ್ಜಿತ್ ಪಟೇಲರನ್ನು ಮೋದಿ ಸರಕಾರ ಬಳಸಿಕೊಂಡಿತು.

ಬಹುಶಃ ಹಳೆಯ ನೋಟುಗಳನ್ನು ಎಣಿಸುವುದನ್ನು ಹೊರತು ಪಡಿಸಿದಂತೆ ಆರ್‌ಐಐ ಗವರ್ನರ್ ಆಗಿ, ಯಾವ ಮಹತ್ವದ ನಿರ್ಧಾರವನ್ನೂ ಪಟೇಲ್ ತೆಗೆದುಕೊಳ್ಳಲಿಲ್ಲ. ದೇಶ ಆರ್ಥಿಕವಾಗಿ ಹಿಂದಕ್ಕೆ ತಳ್ಳಲ್ಪಡುವುದನ್ನು ತಡೆಯುವುದಕ್ಕೆ ಪಟೇಲ್ ಅವರಲ್ಲಿ ಯಾವ ಮಾರ್ಗವೂ ಇರಲಿಲ್ಲ. ನೋಟು ನಿಷೇಧದ ಪರಿಣಾಮಗಳನ್ನು ದೇಶಕ್ಕೆ ವಿವರಿಸುವಲ್ಲೂ ಅವರು ಸೋತರು. ಕಪ್ಪು ಹಣವೂ ಬಾರದೆ, ಆರ್ಥಿಕ ಯಡವಟ್ಟುಗಳಿಗೆ ಕಾರಣವಾದ ನೋಟು ನಿಷೇಧದ ಹೊಣೆಯನ್ನು ಸರಕಾರ ನಿಧಾನಕ್ಕೆ ಆರ್‌ಬಿಐ ತಲೆಗೆ ಕಟ್ಟಲು ಯತ್ನಿಸುವಾಗ ಪಟೇಲ್ ಎಚ್ಚೆತ್ತರು. ಮೋದಿಯ ಕೈಗೊಂಬೆಯಾಗಿದ್ದರೂ, ಸ್ವತಃ ಅರ್ಥಶಾಸ್ತ್ರಜ್ಞರಾಗಿರುವ ಪಟೇಲ್ ಅವರಿಗೆ ಪರಿಸ್ಥಿತಿಯ ಅರಿವಿತ್ತು. ದೇಶ ಎಂತಹ ಆರ್ಥಿಕ ಬಿಕ್ಕಟ್ಟಿನೆಡೆಗೆ ಜಾರುತ್ತಿದೆ ಎನ್ನುವುದನ್ನು ಅವರು ಮನಗಂಡಿದ್ದರು. ಈ ಹಿನ್ನೆಲೆಯಲ್ಲಿ ತನ್ನನ್ನು ಬಳಸಿಕೊಂಡು ಇನ್ನಷ್ಟು ಅನಾಹುತಗಳನ್ನು ಎಸಗುವ ಕೇಂದ್ರದ ತಂತ್ರಕ್ಕೆ ಜೊತೆಯಾಗುವ ಧೈರ್ಯ ಅವರಲ್ಲಿದ್ದಿರಲಿಲ್ಲ. ಅಂತಿಮವಾಗಿ ಅವರು ಬಾಯಿ ತೆರೆಯಲೇ ಬೇಕಾದಂತಹ ಸ್ಥಿತಿ ನಿರ್ಮಾಣವಾಯಿತು.

ಮೋದಿಯ ಮೂಲಕ ಕಾರ್ಪೊರೇಟ್ ಶಕ್ತಿಗಳು ಆರ್‌ಬಿಐಯಲ್ಲಿ ಮೂಗು ತೂರಿಸಿದಾಗ, ಅವರು ಆರ್‌ಬಿಐಯೊಳಗೆ ಆಗುತ್ತಿರುವ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಮತ್ತು ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡತೊಡಗಿದರು. ಆಗಲೇ ಊರ್ಜಿತ್ ಪಟೇಲ್ ತಮ್ಮ ರಾಜೀನಾಮೆಯ ನಿರ್ಧಾರಕ್ಕೆ ಹತ್ತಿರವಾಗಿದ್ದರು. ಆರ್‌ಬಿಐಯನ್ನು ಇನ್ನಷ್ಟು ಬಿಕ್ಕಟ್ಟಿಗೆ ನೂಕಿ ಹೊರಹೋಗುವುದಕ್ಕಿಂತ, ರಾಜೀನಾಮೆ ನೀಡುವುದೇ ಒಳಿತು ಎನ್ನುವುದನ್ನು ಅವರೊಳಗಿನ ಅರ್ಥಶಾಸ್ತ್ರಜ್ಞ ಎಚ್ಚರಿಸಿರಬೇಕು. ಮುಖ್ಯವಾಗಿ, ಬ್ಯಾಂಕ್ ಸಾಲ ನೀಡುವಿಕೆಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಿಸುವ ಒತ್ತಡಕ್ಕೆ ಆರ್‌ಬಿಐ ಬಲವಾದ ಆಕ್ಷೇಪ ವ್ಯಕ್ತಪಡಿಸಿತು. ಒಂದು ವೇಳೆ ನಿಯಮಗಳನ್ನು ಸಡಿಲಿಸಿದ್ದೇ ಆದರೆ, ಬ್ಯಾಂಕ್‌ಗಳಿಗೆ ನಾಲ್ಕು ಲಕ್ಷ ಕೋಟಿ ರೂ.ಗೂ ಅಧಿಕ ಸಾಲ ಪಾವತಿ ಬಾಕಿಯಿರಿಸಿಕೊಂಡಿರುವ ಸರಕಾರದ ಉದ್ಯಮಿ ಮಿತ್ರರಿಗೆ ಬ್ಯಾಂಕ್ ಸಾಲವನ್ನು ಮತ್ತೆ ಪಡೆಯಲು ಸಾಧ್ಯವಾಗಲಿತ್ತು. ಅಷ್ಟೇ ಅಲ್ಲ, ಇದರಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ 2018, ಫೆಬ್ರವರಿ 12ರ ಸುತ್ತೋಲೆಯು ಕಡ್ಡಾಯಗೊಳಿಸಿರುವ ದಿವಾಳಿತನದ ಪ್ರಕ್ರಿಯೆಯಿಂದ ಪಾರಾಗಲು ಸಾಲಗಾರ ಉದ್ಯಮಿಗಳಿಗೆ ಸಾಧ್ಯವಾಗುತ್ತಿತ್ತು. ಇದರಿಂದಾಗಿ ಒಂದು ಲಕ್ಷ ಕೋಟಿ ರೂ. ಗೂ ಅಧಿಕ ಮರುಪಾವತಿಯನ್ನು ಬಾಕಿಯಿರಿಸಿಕೊಂಡ ಅದಾನಿ ಗ್ರೂಪ್, ಎಸ್ಸಾರ್, ಟಾಟಾ ಮತ್ತಿತರ ಕಂಪೆನಿಗಳ ವಿದ್ಯುತ್ ಯೋಜನೆಗಳಿಗೆ ಹೊಸ ಜೀವ ಬಂದಂತಾಗುತ್ತಿತ್ತು. ಆದರೆ ಇದು ಭವಿಷ್ಯದ ಭಾರತದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮವನ್ನು ಮನಗಂಡ ಪಟೇಲ್, ಅದರ ಹೊಣೆಯನ್ನು ಹೊತ್ತುಕೊಳ್ಳಲು ಸಿದ್ಧರಿರಲಿಲ್ಲ. ಆದುದರಿಂದ ಅನಿವಾರ್ಯವಾಗಿ ಸೂತ್ರದಗೊಂಬೆ ಸೂತ್ರವನ್ನು ಕಡಿದುಕೊಂಡಿತು.

ಖ್ಯಾತ ಆರ್ಥಿಕ ತಜ್ಞ ರಘುರಾಮರಾಜನ್‌ರನ್ನು ಆರ್‌ಬಿಐಗೆ ಎರಡನೇ ಅವಧಿಗೆ ನೇಮಕವಾಗದಂತೆ ನೋಡಿಕೊಂಡ ಶಕ್ತಿಗಳು ಯಾರು ಎನ್ನುವುದನ್ನು ನಾವು ಸುಲಭವಾಗಿ ಊಹಿಸಬಹುದು. ತಮ್ಮ ಯೋಜನೆಗಳಿಗೆ ಮಂಜೂರಾದ ಬ್ಯಾಂಕ್ ಸಾಲದ ಹಣವನ್ನು ಅಕ್ರಮವಾಗಿ ಇತರ ಉದ್ದೇಶಗಳಿಗೆ ಬಳಸಿಕೊಂಡಿದ್ದ ರಾಜಕೀಯ ನಂಟಿರುವ ಉದ್ಯಮಿಗಳ ಹೆಸರುಗಳ ಪಟ್ಟಿಯನ್ನು ರಾಜನ್ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿಕೊಟ್ಟಾಗಲೇ ರಾಜನ್ ಅವರ ಹಣೆಬರಹ ನಿರ್ಧಾರವಾಗಿತ್ತು. ಆರ್‌ಬಿಐಯನ್ನೇ ತಮ್ಮ ಖಾಸಗಿ ತಿಜೋರಿಯನ್ನಾಗಿ ಮಾಡುವ ಉದ್ದೇಶದಿಂದ ರಾಜನ್ ಅವರನ್ನು ಮುಂದುವರಿಸದೇ ಅವರ ಸ್ಥಾನಕ್ಕೆ ಪಟೇಲ್ ಅವರನ್ನು ಕೂರಿಸಲಾಯಿತು. ನೋಟು ನಿಷೇಧದ ಹೆಸರಲ್ಲಿ ಬಿಜೆಪಿ, ವಿಶ್ವದಲ್ಲೇ ಅತಿ ಶ್ರೀಮಂತ ಪಕ್ಷವೆಂದು ಗುರುತಿಸಲ್ಪಟ್ಟಿತು. ಕಾರ್ಪೊರೇಟ್ ಸಂಸ್ಥೆಗಳು ಇನ್ನಷ್ಟು ಕೊಬ್ಬಿದವು. ಇದೀಗ ಆರ್‌ಬಿಐಯನ್ನು ಸಂಪೂರ್ಣ ಕಾರ್ಪೊರೇಟ್ ಸೊತ್ತಾಗಿಸುವ ಭಾಗವಾಗಿ ಸರಕಾರ ಸೆಕ್ಷನ್ 7ರ ಪ್ರಯೋಗಕ್ಕಿಳಿದಿದೆ. ಈ ಹಂತದಲ್ಲಿ ಪಟೇಲ್ ಮೆಲ್ಲಗೆ ಆರ್‌ಬಿಐಯ ಹಿಂಬಾಗಿಲಿನಿಂದ ಪಾರಾಗಿದ್ದಾರೆ.

ಪಟೇಲ್ ರಾಜೀನಾಮೆ ನೀಡಿದ್ದಾರೆ ಎಂದಾಕ್ಷಣ ಅವರು ಹಿಂದಿನ ಅನಾಹುತಗಳಿಂದ ಹೊಣೆ ಮುಕ್ತರಾಗುವುದಿಲ್ಲ. ನೋಟು ನಿಷೇಧದ ವೈಫಲ್ಯಕ್ಕೆ ಅವರೂ ದೇಶದ ಕ್ಷಮೆಯಾಚನೆ ಮಾಡಬೇಕಾಗಿದೆ. ಇದೇ ಸಂದರ್ಭದಲ್ಲಿ ಹೊಸ ಗವರ್ನರ್ ನೇಮಕ, ಆರ್‌ಬಿಐ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದರೆ ಅನುಮಾನವಿಲ್ಲ. ಶಕ್ತಿಕಾಂತ ದಾಸ್ ನೋಟು ನಿಷೇಧವನ್ನು ಪೂರ್ಣವಾಗಿ ಬೆಂಬಲಿಸಿದವರು. ಅಷ್ಟೇ ಅಲ್ಲ ಅವರೊಬ್ಬ ಮೋದಿ ಹಿಂಬಾಲಕರೂ ಆಗಿರುವ ಹಿರಿಯ ಅಧಿಕಾರಿ. ಅರ್ಥಶಾಸ್ತ್ರ ಅವರ ಕ್ಷೇತ್ರ ಅಲ್ಲವೇ ಅಲ್ಲ. ಹಿಂದೆ ಮಾನವ ಸಂಪನ್ಮೂಲ ಖಾತೆಯನ್ನು ಸ್ಮತಿ ಇರಾನಿಗೆ ನೀಡಿ, ಅವರ ಮುಖಾಂತರ ಶಿಕ್ಷಣ ಕ್ಷೇತ್ರವನ್ನು ಆರೆಸ್ಸೆಸ್ ಕುಲಗೆಡಿಸಿದಂತೆ, ಇದೀಗ ಇತಿಹಾಸ ಅಧ್ಯಯನ ಮಾಡಿದ ವ್ಯಕ್ತಿಯನ್ನು ಆರ್‌ಬಿಐಗೆ ತಂದು, ದೇಶವನ್ನು ದೋಚಲು ಕಾರ್ಪೊರೇಟ್ ಶಕ್ತಿಗಳು ಸಂಚು ನಡೆಸುತ್ತಿವೆ. ಆರ್‌ಬಿಐ ಜೊತೆಗೆ ಕೇಂದ್ರದ ಈ ಜೂಜಾಟ ದೇಶವನ್ನು ಶಾಶ್ವತವಾಗಿ ವನವಾಸಕ್ಕೆ ತಳ್ಳದಿರಲಿ ಎಂದು ಆಶಿಸೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News